ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಲ್ಪಟ್ಟ 1,68,814 ಪ್ರಕರಣಗಳಲ್ಲಿ 81,115 ಪ್ರಕರಣಗಳು ಇತ್ಯರ್ಥಗೊಂಡಿದ್ದು, 43,73,15,690 ರೂ. ಮೊತ್ತದ ರಾಜೀಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 8,501 ಪ್ರಕರಣಗಳ ಪೈಕಿ 6,399 ಪ್ರಕರಣಗಳು ಇತ್ಯರ್ಥಗೊಂಡಿದ್ದು, 28,12,16,146 ರೂ. ರಾಜೀಯಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 1,60,313 ಪ್ರಕರಣಗಳಲ್ಲಿ 74,716 ಪ್ರಕರಣಗಳು ಇತ್ಯರ್ಥಗೊಂಡಿದ್ದು, 15,60,99,455 ರೂ. ಮೊತ್ತದ ರಾಜೀಯಾಗಿದೆ ಎಂದರು.
ಜಿಲ್ಲೆಯ ನ್ಯಾಯಾಲಯಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಓ.ಎಸ್. ನಂ.151/12 ದಾವೆ ಹಾಗೂ ಏಳು ವರ್ಷ ಮೇಲ್ಪಟ್ಟ ಒಂಭತ್ತು ಪ್ರಕರಣಗಳು, ಐದು ವರ್ಷ ಮೇಲ್ಪಟ್ಟ ಎಂಟು ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಎಂಟು ಪ್ರಕರಣಗಳಲ್ಲಿ 10.50 ಲಕ್ಷ ರೂ.ನಿಂದ 30.50 ಲಕ್ಷ ರೂ.ವರೆಗೆ ಪರಿಹಾರ ಮೊತ್ತ ಪಾವತಿಸುವ ಮೂಲಕ ಇತ್ಯರ್ಥವಾಗಿವೆ ಎಂದರು.
ತೆರಿಗೆ ಪಾವತಿ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮದಡಿ ಜು. 31ರೊಳಗಾಗಿ ಪೂರ್ಣ ಪ್ರಮಾಣದ ತೆರಿಗೆ ಪಾವತಿ ಮಾಡುವವರಿಗೆ ಶೇ. 5ರಷ್ಟು ರಿಯಾಯಿತಿ ನೀಡಲಾಗಿರುತ್ತದೆ. ಹಾವೇರಿ ನಗರದಲ್ಲಿ 48,512 ನಾಗರಿಕರು ನೀರಿನ ಮತ್ತು ಆಸ್ತಿ ತೆರಿಗೆ ಪಾವತಿಸಿದ್ದು, 7,62,12,795 ರೂ. ಮೊತ್ತ ವಸೂಲಿಯಾಗಿದೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳ ಐದು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜೀಮಾಡಿಕೊಂಡು ಮತ್ತೆ ಒಂದಾಗಿದ್ದಾರೆ ಎಂದು ತಿಳಿಸಿದರು.
ಸರ್ವೋಚ್ಛ ನ್ಯಾಯಾಲಯದಲ್ಲಿ ಜು. 29ರಿಂದ ಆಗಸ್ಟ್ 3ರವರೆಗೆ ವಿಶೇಷ ಲೋಕ ಅದಾಲತ್ ನಡೆಸಲಾಗುತ್ತಿದೆ. ಜಿಲ್ಲೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು ಕಕ್ಷಿದಾರರು ವಿಶೇಷ ಲೋಕದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಕೋರಲಾಗಿದೆ ಎಂದರು.
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ವಕೀಲರ ಸಂಘ, ಎಲ್ಲ ತಾಲೂಕು ವಕೀಲರ ಸಂಘ, ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು, ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳು ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮೆಹಬೂಬಖಾನ್ ಗಾಜಿಖಾನ್ ಶಿವಳ್ಳಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಿಂಗೌಡ ಬಿ. ಪಾಟೀಲ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಸಿ.ಜೆ.ಎಂ. ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಪ್ರಕಾಶ ವಿ, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಬಾಲಮುಕುಂದ ರಮೇಶರಾವ ಮುತಾಲಿಕದೇಸಾಯಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ರವಿಪ್ರಕಾಶ ತಿಪ್ಪಣ್ಣ ಅವಿನ್ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಬಿಪಿನ್ ಎಚ್.ಎಂ. ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.