ಕಡೂರು:ಅಧಿಕಾರಿಗಳ ಕಾರ್ಯದಕ್ಷತೆ ಸುಧಾರಿಸಲು ಲೋಕ ಸ್ಪಂದನ ಸಹಕಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಲೋಕ ಸ್ಪಂದನದ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿ, ಎಲ್ಲ ಇಲಾಖೆಗಳೂ ಜನಸ್ನೇಹಿಯಾಗಿರಬೇಕು. ಪೊಲೀಸ್ ಇಲಾಖೆ ಕೂಡ ಜನಸ್ನೇಹಿಯಾಗಿರಬೇಕೆಂದು ನಾಗರಿಕರ ಒತ್ತಾಸೆಯಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಧ್ವನಿಯಾಗಿ ಠಾಣೆಯ ಸಿಬ್ಬಂದಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆಯಲ್ಲಿ ಜನಸ್ಪಂದನ ವಿಶೇಷ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದರ ಉದ್ದೇಶ ಠಾಣೆಗೆ ಬರುವ ಸಾಮಾನ್ಯ ಜನರು ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂಬುದು. ಇದಕ್ಕೆ ಠಾಣಾಧಿಕಾರಿಗಳು ಹೇಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೆ ಆ ಠಾಣೆಗೆ ಅಂಕಗಳು ಬರುತ್ತವೆ. ಒಳ್ಳೆಯ ಅಂಕಗಳು ಬಂದರೆ ಆ ಠಾಣೆಗೆ ಪ್ರಶಸ್ತಿ ನೀಡಲಾಗುವುದು. ಸಖರಾಯಪಟ್ಟಣ ಠಾಣೆಗೆ ವಸತಿ ಗೃಹಗಳ ಕೊರತೆ ಇದೆ. ಇದನ್ನು ಎಸ್ಪಿ ಬಳಿ ಚರ್ಚಿಸಿ ಶೀಘ್ರದಲ್ಲೇ ವಸತಿ ಗೃಹಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಸಿಪಿಐ ಕೆ.ಆರ್.ಶಿವಕುಮಾರ್, ಪಿಎಸ್‌ಐ ಕಿರಣ್‌ಕುಮಾರ್, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಮುಖಂಡರಾದ ಕಲ್ಮರುಡಪ್ಪ, ತ್ರಿಭುವನ್, ಮಂಜುನಾಥ್, ಎನ್.ಡಿ.ಚಂದ್ರಪ್ಪ, ಪೊಲೀಸ್ ಸಿಬ್ಬಂದಿ ಇದ್ದರು.