ನ್ಯೂಸ್

ಲೋಕಸಭೆ ಚುನಾವಣೆ;ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಮಟ್ಟದಲ್ಲಿ ಗೆಲುವಿನ ನಿರೀಕ್ಷೆಯೇ ಬೇರೆ ಇತ್ತು. ರಾಜ್ಯದಲ್ಲಿ ಅಂದುಕೊಂಡಂತೆ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಹೀಗಾಗಿ ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಮಟ್ಟದಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 09 ಸ್ಥಾನ ಬಂದೆವು. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಗಿರುವ ಕುರಿತುಫಾಕ್ಟ್ ಫೈಂಡಿಂಗ್ ಕಮಿಟಿ ಮಾಡಿದ್ದಾರೆ. ಇದು ಇಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯಕ್ಕೂ ಮಾಡಿದ್ದಾರೆ ಎಂದರು.

ಈ ವರದಿ ಮೇಲೆ ಸಚಿವ ಸಂಪುಟ ಬದಲಾವಣೆ ಮಾಡಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ನಮಗೆ ಗೊತ್ತಾಗುವುದಿಲ್ಲ. ಫಾಕ್ಟ್ ಫೈಂಡಿಂಗ್ ವರದಿ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರುವುದೇ ನಮ್ಮನ್ನು ರೆಗ್ಯುಲೇಟ್ ಮಾಡುವುದಕ್ಕೆ ಎಂದು ಹೇಳಿದರು.

ಎರಡು ಆಯಾಮದಲ್ಲಿ ತನಿಖೆ ನಡೆಯುತ್ತಿದೆ:

ವಾಲ್ಮೀಕಿ ನಿಗಮದ ಪ್ರಕರಣ ತನಿಖೆ ನಡೆಯುತ್ತಿದೆ. ಬ್ಯಾಂಕಿಂಗ್ ಆಯಾಮದಲ್ಲಿ ಸಿಬಿಐ ತನಿಖೆ ಮಾಡುತ್ತಿದ್ದರೆ, ನಿಗಮದ ವಿಚಾರವಾಗಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಅಧಿಕೃತವಾಗಿ ಸಿಬಿಐ ನಮ್ಮನ್ನ ಏನೂ ಕೇಳಿಲ್ಲ ಎಂದರು.