ನ್ಯೂಸ್

Lok Sabha 2024: Results Update

11:26PM: ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಲವಾರ್​ನಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತಡ್ಕದ ಪೇಟೆಯಲ್ಲಿ ನಡೆದಿದೆ. ಹಲ್ಲೆಗೊಳಾಗಾದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಮ್.ಕೆ(33) ಅವರನ್ನು ರಾಜೇಶ್ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಿಜೆಪಿ‌ ಗೆಲುವು ಸಾಧಿಸಿದ್ದಕ್ಕೆ ರಾಜೇಶ್​ ಮತ್ತು ತಂಡ ಪಟಾಕಿ ಸಿಡಿಸಿತ್ತು. ಈ ಹಿನ್ನಲೆ ರೊಚ್ಚಿಗೆದ್ದ ಕಳೆಂಜದ ಕುಶಲಪ್ಪ ಗೌಡ ಕಜೆ ಎಂಬಾತ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ವಿಷಯ ತಿಳಿದು ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

11:24PM: ಈ ಚುನಾವಣೆಯ ಫಲಿತಾಂಶವು ಜೆಡಿಎಸ್ (JDS) ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ. ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ ಹೇಳಿದರು.

11:23PM: ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಜನ ಸೋಲಿಸಿದ್ದಾರೆ. INDIA ಒಕ್ಕೂಟ ಸೇರಿದ ಎಲ್ಲಾ ಪಕ್ಷಗಳು ಲಾಭ ಗಳಿಸಿದ್ದರೆ, ಆಪ್​ಗೆ ಮಾತ್ರ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಫಲಿತಾಂಶ ಹಿನ್ನೆಲೆ ಆಪ್​ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ನಾಯಕರು, ಎಲ್ಲಾ 7 ಸ್ಥಾನಗಳಲ್ಲಿ ಸೋತರೂ ಸಿಹಿ ಹಂಚಿದ್ದಾರೆ. 

10:48PM: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದ ಕಾರಣ ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಮೋದಿ ಅವರು. ಸತತ 3ನೇ ಬಾರಿಗೆ ಸರ್ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರ ಬೆವರು ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದ ಅರ್ಪಿಸಿದ ಮೋದಿ, ಇದು ದೇಶಕ್ಕಾಗಿ ದುಡಿಯಲು ಮೋದಿಯವರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

10:13PM: 20 ವರ್ಷಗಳ ನಂತರ ನಾಗಾಲ್ಯಾಂಡ್‍ನ ಏಕೈಕ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಗೆದ್ದು ಇತಿಹಾಸ ನಿರ್ಮಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್ ಸುಪೊಂಗ್‌ಮೆರೆನ್ ಜಮೀರ್ ಅವರು ಪ್ರತಿಸ್ಪರ್ಧಿ ಎನ್‍ಡಿಪಿಪಿಯ ಚುಂಬೆನ್ ಮುರ್ರಿ ಅವರನ್ನು 50,984 ಮತಗಳ ಅಂತರದಿಂದ ಸೋಲಿಸಿದ್ದಾರೆ.

10:09PM: ಇವತ್ತಿನ ಫಲಿತಾಂಶದ ಆಧಾರದ ಮೇಲೆ ಸ್ವಾರ್ಥದ ರಾಜಕಾರಣ ಮಾಡಬಾರದು ಎಂಬುವುದು ತಿಳಿಯುತ್ತದೆ. ಹಾಸನದಲ್ಲಿ ಗೆದ್ದಿರುವುದು ಕಾಂಗ್ರೆಸ್‌ನ ಗೆಲುವಲ್ಲ. ಹಾಸನದಲ್ಲಿ ದೇವೇಗೌಡರ ಫ್ಯಾಮಿಲಿ ಯಾವತ್ತೂ ದಬ್ಬಾಳಿಕೆ ಮಾಡಿಲ್ಲ. ಕೆಲವು ವ್ಯಕ್ತಿಗಳ ನಡವಳಿಕೆಯಿಂದ ಸೋಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ದರೆ ಕಾಂಗ್ರೆಸ್‌ ಅಧಿಕಾರಕ್ಕೇ ಬರುತ್ತಿರಲಿಲ್ಲ ಎಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ.

09:53PM: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದ ಕಾರಣ ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ನರೇಂದ್ರ ಮೋದಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಮೋದಿ, “ಮೂರನೇ ಅವಧಿಯಲ್ಲಿ ದೇಶವು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ” ಎಂದರು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾದರು.

09:12PM: 'ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ, ನಿಮ್ಮೊಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗು ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು' ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ ಕುಮಾರ್​ ಹೇಳಿದ್ದಾರೆ.

08:59PM: ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಮೂರನೇ ಬಾರಿಗೆ ಬಿಜೆಪಿಯ ಈ ಗೆಲುವು, ಈ ವಿಜಯಕ್ಕಾಗಿ ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಶ್ರಮಿಸುತ್ತಿರುವ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ದೇಶದ ಪ್ರತಿಯೊಂದು ಭಾಗ ಹಾಗೂ ಕಾರ್ಯಕರ್ತರು ಬಿಜೆಪಿಗೆ ದೊಡ್ಡ ಆಸ್ತಿಯಾಗಿದೆ ಎಂದು ಅಮಿತ್ ಷಾ ಹೇಳಿದರು.

08:58PM: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕೇರಳದಲ್ಲಿ ಇದೇ ಮೊದಲ ಬಾಗಿ ಬಿಜೆಪಿ ಜಯಗಳಿಸಿದ್ದು, ತ್ರಿಶೂರ್‌ನಲ್ಲಿ ನಟ ಸುರೇಶ್‌ ಗೋಪಿ ಕಮಲ ಅರಳಿಸಿದ್ದಾರೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪಾರಮ್ಯದ ನಡುವೆಯೂ ಕೇಸರಿ ಪಡೆ ಮತದಾರರ ಮನ ಗೆದ್ದಿದೆ. ಇನ್ನೊಂದೆಡೆ ತಿರುವನಂತಪುರಂನಲ್ಲಿ ಯುಡಿಎಫ್‌ (ಕಾಂಗ್ರೆಸ್‌) ಅಭ್ಯರ್ಥಿ ಶಶಿ ತರೂರ್‌ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ವೀರೋಚಿತವಾಗಿ ಸೋಲು ಕಂಡಿದ್ದಾರೆ.

08:41PM: ಜನರ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳ ಕಾರ್ಯಕರ್ತರ ಪರಿಶ್ರಮದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದೇವೆಯೇ ಹೊರತು, ಶತ್ರು ಭೈರವಿ ಯಾಗ ಮಾಡಿ ಅಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ವಿಜೇತ ಎನ್‌ಡಿಎ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

08:31PM: ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸಿದ್ದರೂ, ಅದರ ಮಿತ್ರ ಪಕ್ಷಗಳನ್ನು ಸೆಳೆದುಕೊಂಡು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆಗಳು ಚರ್ಚೆಗೆ ಬಂದಿವೆ. ಈ ಹಿಂದೆ ತಮ್ಮ ಮೈತ್ರಿ ಪಾಲುದಾರರಾಗಿದ್ದ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

08:21PM: ನಾನು ಹಿಂದೆಯೇ ಸರ್ವಾಧಿಕಾರಿ ಧೋರಣೆಯನ್ನು ಬಿಡುವಂತೆ ಬಿಜೆಪಿಯ ನಾಯಕರಲ್ಲಿ ಹೇಳಿದ್ದೆ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಆದರೆ, ಅದಕ್ಕೆ ತಕ್ಕ ಪಾಠವನ್ನು ಜನರೇ ಕಲಿಸಿದ್ದಾರೆ’ - ಹೀಗೆಂದು ಬಿಜೆಪಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಜೂ. 4ರಂದು ನಡೆದಿದ್ದು, ಸಂಜೆ ಹೊತ್ತಿಗೆ ಸ್ಪಷ್ಟವಾದ ಚಿತ್ರಣ ಸಿಕ್ಕಿದ್ದು, ಅದರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ, 293 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು.

08:06PM: ಭಾರತೀಯ ಜನತಾ ಪಕ್ಷ ಇಂದು ಉತ್ತರಾಖಂಡದ ಎಲ್ಲಾ 5 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಅಜಯ್ ಭಟ್ ಅವರು ನೈನಿತಾಲ್-ಉದಮ್ಸಿಂಗ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಜೋಶಿ ಅವರನ್ನು ಸೋಲಿಸುವ ಮೂಲಕ 3,34,548 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅಜಯ್ ಭಟ್ 7,72,671 ಮತಗಳನ್ನು ಪಡೆದರೆ, ಪ್ರಕಾಶ್ ಜೋಶಿ 4,38,123 ಮತಗಳನ್ನು ಪಡೆದಿದ್ದಾರೆ.

07:51PM: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ನಾನು ಜನತಾ ಜನಾರ್ದನ್ ಗೆ ನಮಸ್ಕರಿಸುತ್ತೇನೆ ಎಂದ ಮೋದಿ.

07:43PM: ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅವರಿಗೆ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು ಎಂದ ಡಿಸಿಎಂ ಶಿವಕುಮಾರ್.

07:24PM: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 30 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಕೋಲ್ಕತ್ತಾದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು. ಪ್ರಧಾನಿ ಮೋದಿಗೆ ಬಹುಮತ ಸಿಗದಿರುವುದು ಸಂತಸ ತಂದಿದೆ. ಈ ಬಾರಿ 400 ಸೀಟು ದಾಟುತ್ತೇವೆ ಎಂದು ಹೇಳಿದ್ದಕ್ಕೆ ಪ್ರಧಾನಿಯವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೂಡಲೇ ರಾಜೀನಾಮೆ ನೀಡಬೇಕು.

07:10PM: ಯಾದಗಿರಿ ಜಿಲ್ಲೆಯ ಸುರ‍ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ವಿಜೇತರಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 1,14,886 ಮತಗಳನ್ನು ಪಡೆದಿದ್ದು, ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) 96,566 ಮತಗಳು ಪಡೆದಿದ್ದಾರೆ. ಬಿಜೆಪಿ ವಿರುದ್ಧ 18,320 ಗೆಲುವಿನ ಅಂತರದಿಂದ ಕಾಂಗ್ರೆಸ್‌ ಗೆದ್ದಿದೆ.

07:00PM: ಪಶ್ಚಿಮ ಬಂಗಾಳದ ಬೆಹರಾಮ್​ಪುರ ಲೋಕಸಭೆ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕಿಳಿದಿದ್ದ ಮಾಜಿ ಕ್ರಿಕೆಟಿಗ ಯುಸೂಫ್​ ಪಠಾಣ್​ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸುವ ಮೂಲಕ ಸಂಸತ್​ ಪ್ರವೇಶಿಸಿದ್ದಾರೆ. ಯೂಸುಫ್ ಪಠಾಣ್ 4,08,240 ಮತಗಳನ್ನು ಪಡೆದಿದ್ದಾರೆ. . ಅಧೀರ್ ರಂಜನ್ ಚೌಧರಿ 3,48,889 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 3,12,876 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

06:00PM: ಕೊಯಮತ್ತೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಅಣ್ಣಾಮಲೈ ಸೋಲು ಖಚಿತವಾಗುತ್ತಿದ್ದಂತೆ ಡಿಎಂಕೆ ನಾಯಕರಿ ಮಟನ್​ ಬಿರಿಯಾನಿ ಹಂಚಿ ಸಂಭ್ರಮಿಸಿದ್ದಾರೆ.

05:20PM: ಚಾಮರಾಜನಗರ ಎಸ್​ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸುನೀಲ್​ ಬೋಸ್ ಬಿಜೆಪಿಯ ಎಸ್​. ಬಾಲರಾಜ್​ ವಿರುದ್ಧ​ ಭರ್ಜರಿ ಜಯ ಸಾಧಿಸಿದ್ದಾರೆ. ಇವಿಎಂಗಳಲ್ಲಿ ದಾಖಲಾಗಿದ್ದ13,63,690 ಮತಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸುನಿಲ್‌ ಬೋಸ್‌ ಅವರು 7,51,671 ಮತಗಳನ್ನು ಪಡೆದಿದ್ದಾರೆ. ಎನ್‌ಡಿಎ ಅಭ್ಯರ್ಥಿ ಎಸ್‌.ಬಾಲರಾಜ್‌ ಅವರು 5,62,965 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸುನೀಲ್​ ಬೋಸ್​ 1,88,706 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

05:15PM: ಉತ್ತರಪ್ರದೇಶ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ನ ಅಜಯ್​ ರೈ ವಿರುದ್ಧ 1,52,513 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ರೈ ಮುನ್ನಡೆ ಸಾಧಿಸಿದರು. ಆ ಬಳಿಕ ಮುನ್ನಡೆ ಸಾಧಿಸಿದ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಹ್ಯಾಟ್ರಿಕ್​ ಗೆಲುವು ಕಂಡಿದ್ದಾರೆ.

05:00PM: ಉತ್ತರಪ್ರೇಶದ ಅಮೇಠಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವೆ, ಸ್ಮೃತಿ ಇರಾನಿ ಕಾಂಗ್ರೆಸ್​ನ ಕಿಶೋರ್​ ಲಾಲ್​ ಎದುರು 1,55,788 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಳೆದ ಬಾರಿ ರಾಹುಲ್​ ಗಾಂಧಿಯನ್ನು ಸೋಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಸ್ಮೃತಿ ಈ ಬಾರಿ ಸೋಲುವ ಮೂಲಕ ಮುಖಭಂಗವನ್ನು ಅನುಭವಿಸಿದ್ದಾರೆ.

04:45PM: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್​ನ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಎದುರು 2,68,077 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದ್ದು, ಕಳೆದ 32 ವರ್ಷಗಳಿಂದ ಗೆಲುವು ಸಾಧಿಸುತ್ತಾ ಬಂದಿದೆ. ಜೆಪಿ ಸಂಸದರಾಗಿದ್ದ ಅನಂತ್ ಕುಮಾರ್ ಬಳಿಕ 2019ರಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್​ ನೀಡಲಾಗಿತ್ತು. ನಂತರ ಗೆದ್ದು ಈ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು. ಅದರಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರೇ ಕಣಕ್ಕಿಳಿದು ಗೆಲುವು ಕಂಡಿದ್ದಾರೆ.

04:40PM: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಶೋಬಾ ಕರಂದ್ಲಾಜೆ ಕಾಂಗ್ರೆಸ್​ನ ಪ್ರೊ. ರಾಜೀವ್​ ಗೌಡ ವಿರುದ್ಧ 2,62,537 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಲೋಕಸಬೆ ಚುನಾವಣೆಯ ಹೊಸ್ತಿಲಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್​ ಘೋಷಣೆಯಾದಾಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಾದ್ಯಂತ ಗೋಬ್ಯಾಕ್​ ಚಳುವಳಿ ಮಾಡಲಾಗಿತ್ತು. ಸವಾಲುಗಳ ನಡುವೆಯೇ ಗೆಲ್ಲುವ ಮೂಲಕ ಶೋಭಾ ಕರಂದ್ಲಾಜೆ ಹೈಕಮಾಂಡ್​ ಬಳಿ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

04:35PM: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್​ ನಟಿ, ಕಂಗನಾ ರಣಾವತ್​ ಕಾಂಗ್ರೆಸ್​ನ ವಿಕ್ರಮಾದಿತ್ಯ ಸಿಂಗ್​ ಎದುರು 73,703 ಮತಗಳ ಅಂತರದಲ್ಲಿ ಜಯ ಸಾಧಿಸಿದ್ಧಾರೆ. ಗೆಲುವಿನ ಬೆನ್ನಲ್ಲೇ ಮಾತನಾಡಿರುವ ಕಂಗನಾ ನಾವು ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಸ್ಪರ್ಧಿಸಿದ್ದೇವೆ. ಇದು ಅವರ ವಿಶ್ವಾಸಾರ್ಹತೆ ಮತ್ತು ಅವರ ಭರವಸೆ ಮತ್ತು ಅವರ ಮೇಲಿನ ಜನರ ನಂಬಿಕೆಯ ಫಲಿತಾಂಶವಾಗಿದೆ ನಾವು ಮೂರನೇ ಬಾರಿಗೆ ಸರ್ಕಾರವನ್ನು ರಚಿಸಲಿದ್ದೇವೆ ಎಂದು ಗೆಲುವಿನ ಬಳಿಕ ಹೇಳಿದ್ದಾರೆ.

04:30PM: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಕಂಡಿದ್ದು, ಕಾಂಗ್ರೆಸ್​ನ ಗೀತಾ ಶಿವರಾಜ್​ಕುಮಾರ್​ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸೋಲುಂಡಿದ್ದಾರೆ. ಗೀತಾ ಶಿವರಾಜ್​​ಕುಮಾರ್ ಅವರಿಗೆ ಇದು ಎರಡನೇ ಲೋಕಸಭೆ ಸೋಲು. 2014ರಲ್ಲಿ ಅವರು ಜೆಡಿಎಸ್​ನಿಂದ ಇದೇ ಕ್ಷೇತ್ರದಲ್ಲಿ, ಬಿಎಸ್ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು.

ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಗೀತಾ ಶಿವರಾಜ್ ಕುಮಾರ್ ಗೆಲುವಿಗೆ ಸಹಕಾರವಾಗಲಿದೆ ಎನ್ನಲಾಗಿತ್ತು. ಈಶ್ವರಪ್ಪ ಅವರು ಬಿಜೆಪಿ ಮತಗಳನ್ನು ವಿಭಜಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಿಂದ ರಾಘವೇಂದ್ರ ಗೆದ್ದಿದ್ದಾರೆ.

04:20PM: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಯದುವೀರ್‌ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕಾಂಗ್ರೆಸ್​ನ ಎಂ. ಲಕ್ಷ್ಮಣ್​ ವಿರುದ್ಧ 1,39,262 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಂತರ ಯದುವೀರ್‌ ಲೋಕಸಭೆ ಪ್ರವೇಶಿಸಿದ್ದಾರೆ.

ಎರಡು ಬಾರಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಬದಲಿಗೆ ರಾಜವಂಶಸ್ಥ ಯದುವೀರ್‌ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿ ನಾಯಕರು ಉತ್ಸಾಹದಿಂದಲೇ ಯದುವೀರ್‌ ಪರ ಕ್ಷೇತ್ರದಾದ್ಯಂತ ಓಡಾಡಿ ಪ್ರಚಾರ ನಡೆಸಿದ್ದರು.

04:00PM:  ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕಾಂಗ್ರೆಸ್‌ನ ಬಿ.ಎನ್‌.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೋವಿಂದ ಕಾರಜೋಳ ಅವರು 6,84,890 ಮತಗಳನ್ನು ಪಡೆದರೆ, ಬಿ.ಎನ್‌.ಚಂದ್ರಪ್ಪ 6,36,769 ಮತಗಳಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ 18,56,876 ಮತದಾರರಲ್ಲಿ 13,61,031 ಮತದಾರರು ಹಕ್ಕು ಚಲಾಯಿಸಿದ್ದರು.

03:45PM: 18ನೇ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬಿದಿದ್ದು, ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಖಾತೆ ತೆರೆಯುವುದು ಬಹುತೇಕ ಖಚಿತವಾಗಿದೆ. ತ್ರಿಶೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಸಿಪಿಐ (ಎಂ) ಅಭ್ಯರ್ಥಿ ಎದುರು 74,686 ಮತಗಳ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವು ಸಾಧಿಸಿದ್ದಾರೆ.

ನಾನು ತ್ರಿಶೂರ್ ಜನರಿಗೆ ಕೈಮುಗಿದು ಧನ್ಯವಾದ ಸಲ್ಲಿಸುತ್ತೇನೆ. ಅವರಿಂದಾಗಿಯೇ ಈ ಗೆಲುವು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ನನ್ನ ರಾಜಕೀಯ ಗುರು. ಪ್ರಣಾಳಿಕೆಯಲ್ಲಿ ಮಾತ್ರ ನನಗೆ ನಂಬಿಕೆಯಿಲ್ಲ. ನಾನು ಕೇರಳದ ಸಂಸದನಾಗಿ, ಕೇರಳದ ಎಲ್ಲ ಜನರಿಗಾಗಿ ದುಡಿಯುತ್ತೇನೆ ಎಂದು ಗೆಲುವಿನ ಬಳಿಕ ನಟ ಸುರೇಶ್​ ಗೋಪಿ ಹೇಳಿದ್ದಾರೆ.

03:35PM: ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ 4,93,695 ಮತಗಳನ್ನು ಪಡೆದಿದ್ದಾರೆ. ಗಾಯತ್ರಿ ಸಿದ್ದೇಶ್ವರ 4,61,469 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಜಿ. ಬಿ. ವಿನಯ್ ಕುಮಾರ್ 31,795 ಮತಗಳನ್ನು ಪಡೆದಿದ್ದಾರೆ.

03:30PM: ಬೀದರ್​ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಸಾಗರ್​ ಖಂಡ್ರೆ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ್​ ಖೂಬಾ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ. ಲ್‌ಎಲ್‌ಬಿ ಪದವೀಧರರಾಗಿರುವ ಅವರಿಗೆ ಈಗ 26 ವರ್ಷ ವಯಸ್ಸು. ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಸಕ್ತ ಲೋಕಸಭೆಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನವರಾಗಿದ್ದಾರೆ.

03:00PM: ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಬಿಜೆಪಿಯ ಅಣ್ಣಾಸಾಹೇಬ್​ ಜೊಲ್ಲೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಾಲಿ ಸಂಸದರ ವಿರುದ್ಧ ಯಾವುದೇ ರಾಜಕೀಯ ಅನುಭವವಿಲ್ಲದೆ ಗೆದ್ದು ಅಚ್ಚರಿ ಮೂಡಿಸಿದ್ದಾರೆ. 92,376 ಮತಗಳ ಮುನ್ನಡೆಯನ್ನು ಸಾಧಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ 26 ವರ್ಷದ ಪ್ರಿಯಾಂಕಾ, ಈ ಗೆಲುವಿನೊಂದಿಗೆ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ.

02:55:PM: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್​ ಕಾಂಗ್ರೆಸ್​ನ ಮನ್ಸೂರ್​ ಅಲಿ ಖಾನ್​ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದಾರೆ. ಜನರೊಟ್ಟಿಗೆ ಇದ್ದದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದು ನನ್ನ ಗೆಲುವಿಗೆ ಕಾರಣ. 40 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿರುವೆ. ಅಂದಾಜಿಗಿಂತ 20 ಸಾವಿರ ಮತ ಕಡಿಮೆಯಾಗಿದೆ. ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರಿಗೆ ನನ್ನ ಅಭಿನಂದನೆಗಳು ಅವರಿಬ್ಬರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಗೆಲುವಿನ ಬಳಿಕ ಪಿ.ಸಿ. ಮೋಹನ್​ ಹೇಳಿದ್ದಾರೆ.

02:50PM: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಯ್​​ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ  2,27,535 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯಿದೆ. ಆ ಮೂಲಕ ಗೆಲುವಿನ ಅಂತರದಲ್ಲಿ ತಾಯಿ ಸೋನಿಯಾ ಗಾಂಧಿ ಅವರನ್ನು ರಾಹುಲ್ ಗಾಂಧಿ ಮೀರಿಸಿದ್ದಾರೆ. 2019ರಲ್ಲಿ ಸೋನಿಯಾ ಗಾಂಧಿ 1,67,178 ಮತಗಳ ಅಂತರದ ಗೆಲುವು ಸಾಧಿಸಿದ್ದರು.

02:45PM: ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ್ ಕಾಂಗ್ರೆಸ್​ನ ಸಂಯುಕ್ತಾ ಪಾಟೀಲ್​ ವಿರುದ್ಧ ಜಯ ಸಾಧಿಸಿದ್ದಾರೆ. ದಾಖಲೆಯ ಐದನೇ ಬಾರಿ ಗದ್ದಿಗೌಡರ್​ ಗೆದ್ದು ಬೀಗಿದ್ದಾರೆ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಲು ನಾನು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಗೆಲುವಿನ ಬಳಿಕ ಪಿ.ಸಿ. ಗದ್ದಿಗೌಡರ್​ ಹೇಳಿದ್ದಾರೆ.

02:40PM: ಕಲಬುರಗಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್​ ಜಾಧವ್​ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2019ರ ಲೋಕಸಭೆ ಚುನಾವಣೆಯ ಸೋಲಿನ ಸೇಡನ್ನು ಕಾಂಗ್ರೆಸ್​ ತೀರಿಸಿಕೊಂಡಿದೆ.

02:10PM: ಸತತ ಮೂರು ಬಾರಿ ಸೋಲನುಭವಿಸಿದ್ದ ಕಾಂಗ್ರೆಸ್‌ಗೆ ಈ ಬಾರಿ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಗೆಲುವಿನ ಸಿಹಿ ಸಿಕ್ಕಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಪ್ಪಳ ಮಾಜಿ ಶಾಸಕ ಕೆ. ಬಸವರಾಜ್‌ ಹಿಟ್ನಾಳ್‌ ಅವರ ಪುತ್ರ ಕೆ. ರಾಜಶೇಖರ್‌ ಹಿಟ್ನಾಳ್‌ ಅವರು ಬಿಜೆಪಿ ಡಾ.ಬಸವರಾಜ್‌ ಕ್ಯಾವಟರ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದಾರೆ.

01: 47 PM: ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಸಿ.ಎನ್. ಮಂಜುನಾಥ್​ 8,82,186 ಮತಗಳನ್ನು ಪಡೆದಿದ್ದು, ಕಾಂಗ್ರೆಸ್​ನ ಡಿ.ಕೆ. ಸುರೇಶ್​ 6,82,207 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಸಿ.ಎನ್. ಮಂಜುನಾಥ್​ 1,99,979 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

01:45 PM: ಬಿಜೆಪಿಯ ಸಿ.ಗದ್ದಿಗೌಡರ್‌ ಅವರು ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸತತ ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಪಿ.ಸಿ.ಗದ್ದಿಗೌಡರ್‌ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇನ್ನು ತುಸು ಭರವಸೆ ಮೂಡಿಸಿದ್ದ ಯುವ ನಾಯಕಿ, ಸಚಿವ ಶಿವಾನಂದ್‌ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ ಅವರು ಪರಾಜಯಗೊಂಡಿದ್ದಾರೆ.

01:10 PM : ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರ ನಡುವಿನ ಪೈಪೋಟಿಯ ಮಧ್ಯೆ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಬಂಡಾಯದ ಬಾವುಟ ಬೀಸಿದ್ದ ಕೆ.ಎಸ್.ಈಶ್ವರಪ್ಪ (KS ಅವರಿಗೆ ಹಿನ್ನಡೆಯಾದಂತಾಗಿದೆ.

01:07 PM: ಕೊಪ್ಪಳದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ರಾಜಶೇಖರ್​ ಹಿಟ್ನಾಳ್​​ 54 ಸಾವಿರಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

01:00 PM: ಕೊಯಮುತ್ತರಿನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಅಣ್ಣಾಮಲೈ 17 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

12:50 PM :ಹಾವೇರಿಯ ಬಿಜೆಪಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಗೆಲುವಿನ ನಗೆ ಬೀರಿದ್ದಾರೆ.

12:46 PM: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಕೆ ಸುಧಾಕರ್​ ಭರ್ಜರಿ ಜಯ ಸಾಧಿಸಿದ್ದಾರೆ.

12:39 PM: ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಚ್​.ಡಿ ಕುಮಾರಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ.

12:36 PM : ಬೆಳಗಾವಿ ಕ್ಷೇತ್ರದ ಜಗದೀಶ್​​ ಶೆಟ್ಟರ್​​ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿಯಾಗಿರುವ ಮೃಣಾಲ್​ ಹೆಬ್ಬಾಳ್ಕರ್​ ಸೋಲನ್ನು ಅನುಭವಿಸಿದ್ದಾರೆ.

12:28 PM : ಹಾಸನ ಜೆಡಿಎಸ್​​ ಅಭ್ಯರ್ಥಿಯಾಗಿರುವ ಪ್ರಜ್ವಲ್​ ರೇವಣ್ಣ ಅವರು ಹೀನಾಯ ಸೋಲು ಅನುಭವಿಸಿದ್ದಾರೆ. ಶ್ರೇಯಸ್​ ಪಟೇಲ್​​ ಅವರ ಗೆಲುವಿನ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.

12: 24 PM: ಕಾರವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಗೆದ್ದು ಬಿಗಿದ್ದಾರೆ. ಈ ಮೂಲಕವಾಗಿ ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದ ಅಂಜಲಿ ನಿಂಬಲ್ಕರ್ ಸೋತಿದ್ದಾರೆ.

12:21 PM: ಅಮಿತ್ ಶಾ ಗುಜರಾತ್​ನ ಗಾಂಧಿನಗರದಿಂದ 5 ಲಕ್ಷ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

12:14 PM: ಗುಲಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಅರ್ಧದಷ್ಟು ಮತ ಎಣಿಕೆ ಕಾರ್ಯ ಮುಕ್ತಾಯ 13 ಲಕ್ಷ 6 ಸಾವಿರ ಚಲಾವಣೆಯಾದ ಮತಗಳು. ಸದ್ಯ 6 ಲಕ್ಷ 70 ಸಾವಿರ ಮತ ಎಣಿಕೆ ಮುಕ್ತಾಯ. ಸದ್ಯ ಖರ್ಗೆ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ 10649 ಮತಗಳ ಮುನ್ನಡೆ. ಇನ್ನೂ ಕೂತುಹುಲ ಮೂಡಿಸಿರುವ ಮತ ಎಣಿಕೆ ಕಾರ್ಯ. ಗೆಲುವಿನ ಗುಟ್ಟು ಬಿಟ್ಟು ಕೊಡದ ಮತದಾರ ಪ್ರಭು

12:06 PM: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ. 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ.ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ 101381 ಮತಗಳ ಮುನ್ನಡೆ. ಬಿಜೆಪಿ 503771, ಕಾಂಗ್ರೆಸ್- 402390 ಪಡೆದು 101381 ಮುನ್ನಡೆ ಪಡೆದಿದ್ದಾರೆ.

11:55 AM: ಕೋಲಾರ ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿ ಮಲ್ಲೇಶ್​​ ಬಾಬು ಗೆಲುವು ಸಾಧಿಸಿದ್ದಾರೆ

11:45 AM: ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್​​ ಅಭ್ಯರ್ಥಿ ಅಜಯ್​ ರೈ​​ ಮುನ್ನಡೆ ಸಾಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ 12000 ಮತಗಳೊಂದಿಗೆ ಅಲ್ಪಾವಧಿಗೆ ಹಿಂದುಳಿದಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಮುನ್ನಡೆಯಲ್ಲಿದ್ದಾರೆ.

11:39 AM : ಹಾಸನದಲ್ಲಿ 20453 ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಾಟೆಲ್​​ ಮುನ್ನಡೆ ಸಾಧಿಸಿದ್ದಾರೆ. ಪ್ರಲ್ವಲ್​ ರೇವಣ್ಣ 29, 910 ಮತಗಳ ಅಂತರದಿಂದ ಅವರಿಗೆ ಭಾರಿ ಹಿನ್ನಡೆಯಾಗಿದೆ.

11:12 AM: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್​​ ಅಭ್ಯರ್ಥಿ ಡಿ.ಕೆ ಸುರೇಶ್​​ ಅವರ ವಿರುದ್ಧವಾಗಿ ಡಾ, ಮಂಜುನಾಥ್​​ ಅವರು 1,15,945 ಮತಗಳ ಅಂತರಿಂದ ಮುನ್ನಡೆ ಸಾಧಿಸಿದ್ದಾರೆ.

11:11 AM: ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 300174 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಡಾ.ಅಂಜಲಿ ನಿಂಬಾಳಕರ್‌ 159355 ಮಗಳನ್ನು ಪೊಡೆದು ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿ 140819 ಮತಗಳ ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

10:46 AM: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿ ಮಂಜುನಾಥ್​ ಅವರು 90 ಸಾವಿರ ಮತಗಳ ಅಂತರದಿಂದ ಭಾರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಡಿ,ಕೆ ಸುರೇಶ್​​ ಅವರು ಭಾರಿ ಹಿನ್ನಡೆ ಪಡೆದಿದ್ದಾರೆ.

10:45 AM: ಬೆಳಗಾವಿಯ ಕಾಂಗ್ರೆಸ್​​ ಅಭ್ಯರ್ಥಿಯಾಗಿರುವ ಮೃಣಾಲ್​ ಅವರು ಭಾರಿ ಮತಗಳ ಅಂತರದಿಂದ ಹಿನ್ನೆಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂದ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಮಗ ಮೃಣಾಲ್​ ಅವರು ಬೇಸರಿಂದ ಮತಗಟ್ಟೆಯಿಂದ ಹೊರ ಬಂದಿದ್ದಾರೆ.

10:40 AM: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಎಸ್ಪಿ 5634 ಮತಗಳನ್ನು ಪಡೆದು ಮುಂದಕ್ಕೆ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್- 272743, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ 215996 ಮತಗಳನ್ನು ಪಡೆದುಕೊಂಡಿದ್ದಾರೆ. ಮತ ಎಣಿಕೆ ಮುಂದುವರೆದಿದೆ.

10:30 AM : ಮೈಸೂರು-ಕೊಡಗು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ. ಬಿಜೆಪಿ ಅಭ್ಯರ್ಥಿ ಯದುವೀರ್-236037 ಮತಗಳು. ಕಾಂಗ್ರೆಸ್​​ ಅಭ್ಯರ್ಥಿ ಲಕ್ಷ್ಮಣ್ 179663 ಮತಗಳು, ಯದುವೀರ್ 56374 ಮತಗಳ ಮುನ್ನಡೆ ಸಾಧಿಸಿದ್ದಾರೆ.

10:27 AM: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 4 ಸುತ್ತುಗಳ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ 1,44,617 ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ 1,40,024. ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ‌ 4594 ಮತಗಳ ಮುನ್ನಡೆ ಸಾಧಿಸಿದ್ದಾರೆ.

10:15 AM: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಯದುವೀರ್ 1,97,069 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ 1,48,751 ಮತಗಳನ್ನು ಪಡೆದಿದ್ದಾರೆ. ಯದುವೀರ್ ಒಟ್ಟು 48,318 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

10:5 AM: ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ- 170985 ಮತಗಳಿಂದ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್​​ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ 89005 ಮತಗಳಿಂದ ಹಿನ್ನಡೆಯಾಗಿದ್ದಾರೆ.

10:02 AM: ತುಮಕೂರು ಬಿಜೆಪಿ ಅಭ್ಯರ್ಥಿ ವಿ‌. ಸೋಮಣ್ಣ 117215 ಮತ. ಎಸ್.ಪಿ.ಮುದ್ದಹನುಮೇಗೌಡಗೆ 92494 ಮತವಿ.ಸೋಮಣ್ಣಗೆ 24721 ಮತ ಮುನ್ನಡೆ ಸಾಧಿಸಿದ್ದಾರೆ

10:00 AM : ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ ಕೆ ಸುಧಾಕರ್ ಮುನ್ನಡೆ 22063 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

9:50 AM: ಬಳ್ಳಾರಿ‌ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಯಲ್ಲಿ ಬಿಜೆಪಿ ‌ಅಭ್ಯರ್ಥಿ ಶ್ರೀರಾಮುಲು‌ ಗಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ‌.ತುಕಾರಾಮ್ 34,425 ಮತಗಳಿಂದ ಮುನ್ನಡೆ ಪಡೆದಿದ್ದಾರೆ‌.

9:49 AM : ಚಿಕ್ಕೋಡಿಯಲ್ಲಿ ಐದನೇ ಸುತ್ತಿನಲ್ಲೂ ಕಾಂಗ್ರಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ 32,936 ಮತಗಳ ಭಾರಿ ಮುನ್ನೆಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಪ್ರಿಯಾಂಕಾ‌ ಜಾರಕಿಹೊಳಿ 1,63,013 ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ 1,30,077 ಮತಗಳನ್ನು ಪಡೆದಿದ್ದಾರೆ.

9:44 AM: ಬಳ್ಳಾರಿ‌ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಯಲ್ಲಿ ಬಿಜೆಪಿ ‌ಅಭ್ಯರ್ಥಿ ಶ್ರೀರಾಮುಲು‌ ಗಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ‌.ತುಕಾರಾಮ್ 24,336 ಮತಗಳಿಂದ ಮುನ್ನಡೆ ಪಡೆದಿದ್ದಾರೆ‌. ಒಟ್ಟು ಕಾಂಗ್ರೆಸ್ ಅಭ್ಯರ್ಥಿ - 1,41,834 ಬಿಜೆಪಿ ಅಭ್ಯರ್ಥಿ ಶ್ರೀರಾಮುಲು‌ -117,498 ಮತಗಳಗಳನ್ನು ಪಡೆದಿದ್ದಾರೆ.

9:33 AM : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ 2744 ಮತಗಳಿಂದ ಮುನ್ನಡೆ. ಕಾಂಗ್ರೆಸ್ 38,640, ಬಿಜೆಪಿ35896 ಮತ.

9:31 AM : ಧಾರವಾಡದಲ್ಲಿ 10,351 ಮತಗಳ ಅಂತರದಿಂದ ಬಿಜೆಪಿಯ ಪ್ರಲ್ಹಾದ ಜೋಶಿ ಮುನ್ನಡೆ, ಕಾಂಗ್ರೆಸ್‌ನ ವಿನೋದ್​ ಅಸೂಟಿಗೆ ಹಿನ್ನಡೆ

9:29 AM : ಉತ್ತರ ಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ 2126 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

9:24 AM: ಚಿಕ್ಕೋಡಿಯಲ್ಲಿ 4ನೇ ಸುತ್ತು ಮತ ಎಣಿಕೆ ಮುಕ್ತಾಯ, 20,753 ಮತಗಳಿಂದ ಪ್ರಿಯಾಂಕಾ ಮುನ್ನಡೆ

9:23 AM: ಹಾಸನದಲ್ಲಿ ಮೊದಲ‌ ಸುತ್ತು ಮುಕ್ತಾಯ. ಜೆಡಿಎಸ್ ಗೆ 85593 ಮತ. ಕಾಂಗ್ರೆಸ್ ಗೆ 83117 ಮತ. 2476 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ

9:22 AM: ಹಿಮಾಚಲ ಪ್ರದೇಶದ ಹಮೀರ್‌ಪುರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಅನುರಾಗ್ ಸಿಂಗ್ ಠಾಕೂರ್ 6492 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

9:21 AM: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ 8718 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

9:12 AM: ಜೆಡಿಎಸ್​ ಅಭ್ಯರ್ಥಿ ಎಚ್​ಡಿ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಸ್ಟಾರ್​ ಚಂದ್ರು ಹಿನ್ನಡೆ ಸಾಧಿಸಿದ್ದಾರೆ.

9:11 AM: ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಅವರು 3500 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಾಟೀಲ್​​ ಹಿನ್ನಡೆ ಸಾಧಿಸಿದ್ದಾರೆ.

9:10 AM: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ 40480 ಮತಗಳನ್ನು ಪಡೆದಿದ್ದರೆ. ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಎಸ್.ಬಾಲರಾಜ್ 35217 ಮತಗಳನ್ನು ಗಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು 5263 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

9:10 AM: ಬಳ್ಳಾರಿ‌ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. ಬಿಜೆಪಿ ‌ಅಭ್ಯರ್ಥಿ ಶ್ರೀರಾಮುಲು‌ ಗಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ‌.ತುಕಾರಾಮ್ 3940 ಮತಗಳಿಂದ ಮುನ್ನಡೆ ಪಡೆದಿದ್ದಾರೆ‌. ಒಟ್ಟು ಕಾಂಗ್ರೆಸ್ - 38303, ಬಿಜೆಪಿ - 34363 ಮತಗಳ ಎಣಿಕೆಯಾಗಿದೆ.

9:05 AM: ಚಿತ್ರದುರ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪಗೆ 32239 ಮತ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ್ ಗೆ 32164ಮತ. 75ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮುನ್ನಡೆ
ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ, ಕೈ ಅಭ್ಯರ್ಥಿಗೆ ಅಲ್ಪ ಮುನ್ನಡೆ.

9:01 :AM: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ. ಎರಡನೇ ಸುತ್ತಿನಲ್ಲಿ 22590 ಮತ ಪಡೆದ ಕಾಗೇರಿ 1338 ಮತಗಳಿಂದ ಮುನ್ನಡೆ. ಕಾಂಗ್ರೆಸ್‌ ನ ಅಂಜಲಿ ನಿಂಬಾಳಕರ್ ಗೆ 9252. ಮತ

8:59 AM:: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 5344 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 21,006 ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ 26,350 ಮತಗಳನ್ನು ಪಡೆದಿದ್ದಾರೆ

8: 58 AM: ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಿನ್ನಡೆ, ಕಾಂಗ್ರೆಸ್​​ ಅಭ್ಯರ್ಥಿ ಆನಂದ್​​ ಗಡ್ಡದೇವರಮಠಗೆ ಮುನ್ನಡೆ

8: 57 AM: 269 ಕ್ಷೇತ್ರಗಳಲ್ಲಿ ಎನ್​ಡಿಎ ಮುನ್ನಡೆ

8: 55 AM: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಮುನ್ನಡೆ

8: 52 AM: ಮೈಸೂರಿನಲ್ಲಿ 2,390 ಮತಗಳಿಂದ ಎಂ.ಲಕ್ಷ್ಮಣ್ ಮುನ್ನಡೆ, ಯದುವೀರ್​ ಹಿನ್ನಡೆ

8: 51 AM: ಮಂಡ್ಯದಲ್ಲಿ 27,000 ಮತಗಳಿಂದ ಎಚ್​.ಡಿ. ಕುಮಾರಸ್ವಾಮಿ ಮುನ್ನಡೆ, ಸ್ಟಾರ್​ ಚಂದ್ರುಗೆ ಹಿನ್ನಡೆ

8: 50 AM: ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಮುನ್ನಡೆ, ರಕ್ಷಾ ರಾಮಯ್ಯಗೆ ಹಿನ್ನಡೆ

8: 48 AM: ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಮುನ್ನಡೆ

8: 46 AM: ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಾಟೀಲ್​​ ಮುನ್ನಡೆ ಸಾಧಿಸಿದ್ದಾರೆ.

8: 44 AM: ಹಾಸನದಲ್ಲಿ ಅಂಚೆ ಮತಗಳಲ್ಲಿ ಪ್ರಜ್ವಲ್​ ರೇವಣ್ಣಗೆ ಹಿನ್ನಡೆ

8: 43 AM : 1800 ಮತಗಳಿಂದ ಡಾ. ಮಂಜುನಾಥ್ ಮುನ್ನಡೆ, ಡಿ.ಕೆ. ಸುರೇಶ್​ ಹಿನ್ನಡೆ

8:37:AM : ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಹಿನ್ನಡೆ ಸಾಧಿದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಕಾಂಗ್ರೆಸ್​​ ಅಭ್ಯರ್ಥಿಯೂ ಆಗಿರುವ ಮೃಣಾಲ್​ ಹೆಬ್ಬಾರ್​​ ಮುನ್ನಡೆ ಸಾಧಿಸಿದ್ದಾರೆ.

8:29 AM: ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್​​ ಹಿನ್ನಡೆ ಸಾಧಿಸಿದ್ದಾರೆ.

8:28 :AM: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಅಂಚೆ ಮತಗಳ ಏಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

8:26 AM: ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಸುತ್ತಿನ ಮತ ಏಣಿಕೆಯಲ್ಲಿ ಡಿ.ಕೆ ಸುರೇಶ್​​ ಅವರು ಮುನ್ನೆಡೆ ಸಾಧಿಸಿದ್ದಾರೆ.

8:20 AM: ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕೈ ಅಭ್ಯರ್ಥಿ ರಾಜಶೇಖರ್​​ ಹಿಟ್ನಾಳ್​ ​​ ಹಿನ್ನೆಡೆ ಸಾಧಿಸಿದ್ದಾರೆ.

8:10 AM: ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮುನ್ನಡೆ

7:05 AM: ಮತಎಣಿಕೆ ಆರಂಭಕ್ಕೂ ಮುನ್ನವೇ ಸೂರತ್​ನಲ್ಲಿ ಎನ್​ಡಿಎ ಅಭ್ಯರ್ಥಿ ಮುಖೇಶ್​ ಅವಿರೋಧ ಗೆಲುವು