ನ್ಯೂಸ್

ಲೋಗೋ ಮಾದರಿ ಕಳುಹಿಸಿ, ಸಂಭ್ರಮದಲ್ಲಿ ಪಾಲ್ಗೊಳ್ಳಿ

ಬೆಂಗಳೂರು: ಕರ್ನಾಟಕ ಸಂಭ್ರಮ 50ರ ಹಿನ್ನೆಲೆಯಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ) ಬಳಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಲಾಂಛನ ಸಿದ್ಧಪಡಿಸಿ ಕಳುಹಿಸುವ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಮನವಿ ಮಾಡಿದ್ದಾರೆ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50- ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಾಲ್ಕು ಕಂದಾಯ ವಿಭಾಗವಾರು ಸಭೆ ನಡೆಸಿ ಸಾಹಿತಿ, ಕಲಾವಿದರು, ರಂಗಕರ್ಮಿ ಹಾಗೂ ಹೋರಾಟಗಾರರಿಂದ ಸಲಹೆ ಪಡೆಯಲಾಗಿದೆ. ಪ್ರತಿಯೊಬ್ಬರಿಂದ ಉತ್ತಮ ಸಲಹೆ ವ್ಯಕ್ತವಾಗಿದೆ. ಸಾರ್ವಜನಿಕರು ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಲಾಂಛನದ ಮಾದರಿಗೆ ಆಹ್ವಾನಿಸಲಾಗಿದ್ದು, ಸೆ.30ರೊಳಗೆ ಲಾಂಛನದ ಮಾದರಿ ಕಳುಹಿಸಲು ಅವಕಾಶವಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ರೂ.25 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿದೆ. ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ.