ಬೆಂಗಳೂರು: ''ಪ್ರವಾಸಕ್ಕೆ ಹೋಗುವ ಮೊದಲು ನನ್ನ ಪತ್ನಿ ಪಲ್ಲವಿ, 'ಭಾನುವಾರ ಯಾಕ್ರೀ ಹೋಗ್ತೀರಿ? ಎಲ್ಲರೂ ನಿಮ್ಮಂತೆಯೇ ಕೆಲಸ ಮಾಡುತ್ತಾರಾ? ಮನೆಯಲ್ಲೇ ಇರಿ' ಎಂದಳು. ಆದರೂ ಹೋದೆ. ನಾನು ಪ್ರವಾಸ ಮಾಡಿದ್ದು ಸ್ವಂತ ಕಾರ್ಯಕ್ಕಲ್ಲ, ಸಾರ್ವಜನಿಕ ಕೆಲಸ ಮಾಡಲು'' ಎಂದಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಲಾಕ್‌ಡೌನ್ ನಿಯಮ ಉಲ್ಲಂಘನೆ ವಿವಾದದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಾದ್ಯಂತ ಭಾನುವಾರವಿಡೀ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದರೂ ನಿನ್ನೆ(ಭಾನುವಾರ) ಬೆಂಬಲಿಗರ ಜತೆ ಸಚಿವರು ಪ್ರವಾಸಿ ತಾಣಗಳಲ್ಲಿ ಸಂಚರಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಆ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ''ಒಂದು ವೇಳೆ ನಾನು ಬಾರದಿದ್ದರೆ, 'ಧರೆ ಕುಸಿದರೂ ಬಾರದ ಸಚಿವ, ಶಾಸಕ' ಎಂದು ಟೀಕಿಸುತ್ತಾರೆ. ಏನು ಮಾಡುವುದು? ಅದಕ್ಕೆ ಹೇಳಿರಬೇಕು, ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ. ನಾನು ಯಾರನ್ನು ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ. ಜೀವನ ತುಕ್ಕು ಹಿಡಿದು ಹೋಗಬಾರದು, ಸವೆದು ಹೋಗಬೇಕೆಂದು ಕೆಲಸ ಮಾಡುತ್ತಿದ್ದೇನೆ'' ಎಂದಿದ್ದಾರೆ. ಇದನ್ನೂ ಓದಿರಿ ವಿಭೂತಿ ಹಚ್ಚಿದರೆ ಕರೊನಾ ಬರಲ್ಲ!
''ಹಿಂದೆಯೂ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ. ಕೆಲಸ ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪು. ಹಾಗಿದ್ದರೆ ಯಾವುದು ಸರಿ? ನಿಯಮ ಮುರಿಯಬೇಕೆಂದು ಅಥವಾ ಇವೆಲ್ಲವನ್ನೂ ಮೀರಿದವನೆಂಬ ಅಹಂಕಾರವು ನನಗಿಲ್ಲ. ನನಗಿರುವುದು ಕರ್ತವ್ಯ ಪ್ರಜ್ಞೆ ಮಾತ್ರ. ನನ್ನ ಪ್ರವಾಸವನ್ನೇ ವಿವಾದದ ದೃಷ್ಟಿಯಿಂದ ನೋಡುವವರಿಗೆ ಇನ್ನೊಂದು ಮುಖವೂ ಇದೆ ಹಾಗೂ ಇರುತ್ತದೆ ಎಂದು ಹೇಳುವ ದೃಷ್ಟಿಯಿಂದಷ್ಟೇ ಇದನ್ನು ಹಂಚಿಕೊಳ್ಳುತ್ತಿದ್ದೇನೆ''.
''ಜಾವಳಿ, ದುರ್ಗದಹಳ್ಳಿ ಭಾಗದಲ್ಲಿ ಅಲ್ಲಲ್ಲಿ ಧರೆ ಕುಸಿತ ಲ್ಯಾಂಡ್ ಸ್ಲೈಡ್ ಆಗಿದೆ ಎಂಬ ಮಾಹಿತಿ ಬಂತು. ಹಾಗಾಗಿ ಭಾನುವಾರದ ಲಾಕ್‌ಡೌನ್ ಅರಿವಿದ್ದರೂ ನಾನು ಪ್ರವಾಸ ಕೈಗೊಂಡೆ. ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ ಬಗ್ಗೆ ಯೋಜನಾ ವರದಿ ತಯಾರಿಸಲು ಸ್ಥಳೀಯ ಅಗತ್ಯಕ್ಕೆ ತಕ್ಕ ನಿರ್ದೇಶನ ನೀಡಲು ನಾನು ಸೇರಿದಂತೆ ಆರೇಳು ಜನರ ಸಣ್ಣ ತಂಡದೊಂದಿಗೆ ಸ್ಥಳೀಯ ಶಾಸಕ ಕುಮಾರಸ್ವಾಮಿ ಅವರೊಂದಿಗೆ ದೇವರಮನೆ, ಹೇಮಾವತಿ ನದಿಯ ಉಗಮಸ್ಥಾನ ಜಾವಳಿ, ದುರ್ಗದ ಬೈಲು, ಬಲ್ಲಾಳರಾಯನ ದುರ್ಗ, ನಡುವಾಳೆ ಮೊದಲಾದ ಕಡೆ ಹೋಗಿದ್ದೆ''.