ನ್ಯೂಸ್

ದಿಗ್ಬಂಧನ ಕ್ರಮೇಣ ಸಡಿಲಿಕೆಗೆ ವೈದ್ಯರ ಸಲಹೆ; ಗುಣಮಟ್ಟದ ಪಿಪಿಇ ಕಿಟ್​ ಪೂರೈಕೆಗೆ ಮನವಿ

lakshmihegde

ಬೆಂಗಳೂರು: ಕಠಿಣ ನಿಯಮಗಳೊಂದಿಗೆ ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ, ಆಸಕ್ತ ಖಾಸಗಿ ಆಸ್ಪತ್ರೆಗಳಿಗೂ ಕರೊನಾ ಸೋಂಕು ತಪಾಸಣೆಗೆ ಅನುಮತಿ ನಿಡಿಕೆ ಸೇರಿ ಹಲವು ಸಲಹೆಗಳನ್ನು ಸರ್ಕಾರಕ್ಕೆ ವೈದ್ಯ ವೃಂದ ನೀಡಿದೆ.

ಸೋಂಕು ತಡೆ ನಿರ್ವಹಣೆ ಪ್ರಯತ್ನವಾಗಿ ವೈದ್ಯ ವೃಂದದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಸೋಮವಾರ ವಿಡಿಯೋ ಮೂಲಕ ಚಿಂತನಾ ಸಭೆ ನಡೆಸಿದರು. ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಗಳಲ್ಲಿ ಹಂತಹಂತವಾಗಿ ಲಾಕ್​ಡೌನ್ ಸಡಿಲಿಸುವ ವಿಧಾನ ಅನುಸರಿಸಬೇಕು. ಸರ್ಕಾರದ ನಿಯಮಾವಳಿ ಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದೇ ಸಂಚರಿಸುವುದು ಶಿಕ್ಷಾರ್ಹವಾಗಬೇಕು. 60ರ ವಯೋಮಿತಿ ದಾಟಿದವರು ಹಾಗೂ ಆರೋಗ್ಯದ ಸಮಸ್ಯೆ ಇರುವವರು ಮನೆಯಲ್ಲೇ ಇರಬೇಕು. ಮನೆಯಲ್ಲಿಯೂ ಹೊರಗೆ ಸಂಚರಿಸುವವರ ಜತೆಗೆ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯರ ವೃಂದ ಸಲಹೆ ನೀಡಿದೆ. ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ರಾಜ್ಯ ಸಂಚಾಲಕ ಡಾ.ಬಸವರಾಜ ಕೆಂಕೆರೆ ಇದ್ದರು.

ವೈದ್ಯರು ನೀಡಿರುವ ಸಲಹೆಗಳು
  1. ಆರೋಗ್ಯ ಕೇಂದ್ರಗಳಿಗೆ ಸಾಮಾನ್ಯ ಸಮಸ್ಯೆ ಯಿದ್ದಲ್ಲಿ ಒಬ್ಬ, ತೀವ್ರತರದ ಸಮಸ್ಯೆಯಿದ್ದಲ್ಲಿ ಇಬ್ಬರು ಸಹಾಯಕರು ತೆರಳುವುದು.
  2. ಆಧಾರ್ ಅಥವಾ ಸರ್ಕಾರ ನೀಡಿದ ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯ. ಇದರಿಂದ ಆಸ್ಪತ್ರೆಯವರು ರೋಗಿಗಳ ಸರಿಯಾದ ಗುರುತು ಹಾಗೂ ವಿಳಾಸ ನಮೂದಿಸಿಕೊಳ್ಳಲು ನೆರವಾಗಲಿದೆ.
  3. ಕರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಂಭವವಿರುವ ಕಾರಣ, ಜ್ವರ ಕೇಂದ್ರಗಳನ್ನು ಹೆಚ್ಚಿಸುವುದು (ಖಾಸಗಿ ಆಸ್ಪತ್ರೆ ಹೊರ ಭಾಗದಲ್ಲಿ ನಿಯಮಾನುಸಾರ ಜ್ವರ ಕೇಂದ್ರ ತೆರೆಯಲು ಪರವಾನಗಿ).
  4. ಪ್ರತಿ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ.
  5. ಖಾಸಗಿ ಆಸ್ಪತ್ರೆಗಳು ಕರೊನಾ ವಿಶೇಷ ಆಸ್ಪತ್ರೆಗಳಾಗಿ ನಿರ್ವಹಿಸಲು ಮುಂದಾದರೆ ತಪಾಸಣೆ ಮಾಡಿ ಅನುಮತಿ ನೀಡುವುದು.
  6. ಖಾಸಗಿ ಆಸ್ಪತ್ರೆಗಳಿಗೂ ಗುಣಮಟ್ಟದ ಪಿಪಿಇ ಕಡಿಮೆ ದರದಲ್ಲಿ ಪೂರೈಕೆ.
  7. ಹಳ್ಳಿ, ಪಟ್ಟಣ, ತಾಲೂಕು ಕೇಂದ್ರಗಳಿಂದ ರೋಗಿಗಳ ಓಡಾಟಕ್ಕೆ ಅಂಬುಲೆನ್ಸ್ ರೀತಿಯಲ್ಲಿ ಸರ್ಕಾರಿ ಬಸ್​ಗಳ ಅನುಕೂಲತೆ ಒದಗಿಸುವುದು.
  8. ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭಿಸುತ್ತಿದ್ದ ಆರೋಗ್ಯ ಸೇವೆಗಳನ್ನು ಖಾಸಗಿ ನೆಟ್​ವರ್ಕ್
  9. ಆಸ್ಪತ್ರೆಗಳಲ್ಲಿ ನಿರ್ವಹಿಸಲು ಅವುಗಳಿಗೆ ಸರ್ಕಾರ ದಿಂದ ಪ್ರಿಅರ್ತ್ (ಅನುಮತಿ ಹಾಗೂ ಖರ್ಚು ಸಂದಾಯದ ಒಡಂಬಡಿಕೆ ಪತ್ರ) ಕೊಡುವ ವ್ಯವಸ್ಥೆ ತ್ವರಿತಗತಿಯಲ್ಲಿ ಮಾಡುವುದು.
  10. ಕಾಯ್ದೆ ರೀತಿ ಅನುಮತಿ ಪಡೆದ ಅಲೋಪಥಿ ಆಸ್ಪತ್ರೆಗಳು ಸಕ್ರಿಯವಾಗಿ ಕೆಲಸ ಮಾಡಲು ಹಾಗೂ ಶುಶ್ರೂಷಕರು ಹಾಗೂ ಆಸ್ಪತ್ರೆ ಇತರ ನುರಿತ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ನಿರ್ದೇಶಿಸುವುದು.
  11. ಆಯುಷ್ ಆಸ್ಪತ್ರೆ, ಕ್ಲಿನಿಕ್​ಗಳು ಕೆಲಸ ನಿರ್ವಹಿಸಬೇಕೇ ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಳೆದು ಸೂಚನೆ ನೀಡುವುದು.
  12. ಪ್ರತಿ 25 ಖಾಸಗಿ ಆಸ್ಪತ್ರೆ/ ಕ್ಲಿನಿಕ್​ಗಳಿಗೆ ಒಬ್ಬ ಸರ್ವೆಲೆನ್ಸ್ ವೈದ್ಯರನ್ನು ಖಾಸಗಿ ಆಸ್ಪತ್ರೆಗಳ ಸಮೂಹ ಸಂಘಗಳಿಂದ ನೇಮಿಸಬೇಕು. ಅವರಿಗೆ ಪ್ರತಿದಿನ ತಮ್ಮ ಆಸ್ಪತ್ರೆಗಳ ಸರ್ವೆಲೆನ್ಸ್ ರಿಪೋರ್ಟ್ ಜಿಲ್ಲಾ ಸರ್ವೆಲೆನ್ಸ್ ವೈದ್ಯಾಧಿಕಾರಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗೆ ಕೊಡುವ ಜವಾಬ್ದಾರಿ ಒಪ್ಪಿಸುವುದು. ಇದರಿಂದ ಶೀತಜ್ವರ, ತೀವ್ರ ಉಸಿರಾಟ ಸಮಸ್ಯೆಯ ರೋಗದ ಲಕ್ಷಣ ಇರುವವರನ್ನು ಗುರುತಿಸಿ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುವುದಕ್ಕೆ ನೆರವಾಗುತ್ತದೆ.
  13. ಕರೊನಾ ಉತ್ತಮ ನಿರ್ವಹಣೆ, ಹೈಡ್ರೊಕ್ಸಿ ಕ್ಲೋರೊಕ್ವಿನ್ ಬಳಕೆ, ಆರೋಗ್ಯ ಘಟಕಗಳಿಗೆ ನಿಗದಿತ ಕರೊನಾ ಮಾರ್ಗಸೂಚಿ, ಕರೊನಾ ಅಲ್ಲದ ಆಸ್ಪತ್ರೆಗಳಿಗೆ ಕರೊನಾ ಪತ್ತೆಗೆ ಮಾರ್ಗಸೂಚಿ, ಆಸ್ಪತ್ರೆಗಳ ಪುನಾರಂಭಕ್ಕೆ ಶುಚಿತ್ವದ ಮಾರ್ಗಸೂಚಿ ಹಾಗೂ ಪ್ರತಿಯೊಂದು ವೈದ್ಯಕೀಯ/ ಶಸ್ತ್ರಚಿಕಿತ್ಸಾ ವಿಶೇಷ ಹಾಗೂ ಅತ್ಯಾಧುನಿಕ ವಿಭಾಗಗಳಿಗೆ ಸೂಕ್ತ ನಿರ್ದೇಶನ ನೀಡುವುದು.