ನವದೆಹಲಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು, ಜಾರಿ ಮಾಡಿರುವ ಯೋಜನೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈಗ ವಿಧಿಸಲಾಗಿರುವ ಲಾಕ್ಡೌನ್ ಯಾವುದಕ್ಕೂ ಪ್ರಯೋಜನ ಬರುವುದಿಲ್ಲ ಎಂದು ಹೇಳಿರುವ ಅವರು, ಲಾಕ್ಡೌನ್ ಒಂದು ನಿಲುಗಡೆ (ಪಾಸ್ ಬಟನ್) ಅಷ್ಟೇ. ಇದರಿಂದ ಕರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಿಲ್ಲ. ಲಾಕ್ಡೌನ್ ಮುಗಿದ ತಕ್ಷಣ ನಾವೆಲ್ಲ ಹೊರಗೆ ಬರುತ್ತೇವೆ. ಆಗ ಮತ್ತೆ ವೈರಸ್ ಕೂಡ ತನ್ನ ಕೆಲಸ ಶುರು ಮಾಡುತ್ತದೆ ಎಂದಿದ್ದಾರೆ.
ಭಾರತದಲ್ಲಿ ಕೊವಿಡ್ ಟೆಸ್ಟ್ ಪ್ರಮಾಣ ತೀರ ಕಡಿಮೆ ಇದೆ. ಅದರ ವೇಗವನ್ನು ಹೆಚ್ಚಿಸಬೇಕು. ದೇಶದಲ್ಲಿ ಕರೊನಾ ಹಾಟ್ಸ್ಫಾಟ್ ಮತ್ತು ಹಾಟ್ಸ್ಫಾಟ್ ಅಲ್ಲದ ವಲಯಗಳೆಂದು ಗುರುತಿಸಬೇಕು. ತಪಾಸಣೆಯ ವೇಗವನ್ನು ಅಧಿಕಗೊಳಿಸದೆ, ಹೆಚ್ಚೆಚ್ಚು ಜನರನ್ನು ಟೆಸ್ಟ್ಗೆ ಒಳಪಡಿಸದೆ ಎಲ್ಲರನ್ನೂ ಲಾಕ್ ಮಾಡುವುದರಿಂದ ಏನೂ ಉಪಯೋಗವಿಲ್ಲ. ಜನರನ್ನು ಲಾಕ್ ಮಾಡಿದಾಗ ಕಾಯಿಲೆಯೂ ಲಾಕ್ ಆಗುತ್ತದೆ. ಅವರು ಹೊರಬಂದ ಕೂಡಲೇ ವೈರಸ್ ಕೂಡ ಮತ್ತೆ ಹೊರಬರುತ್ತದೆ. ಹಾಗಾಗಿ ಕೊವಿಡ್-19 ಟೆಸ್ಟಿಂಗ್ ವೇಗ ಹೆಚ್ಚಳವೇ ಕರೊನಾ ಮಣಿಸಲು ಇರುವ ಏಕೈಕ ಮಾರ್ಗ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಾಗೇ ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿದ್ದರ ಬಗ್ಗೆಯೂ ರಾಹುಲ್ ಗಾಂಧಿ ಕಳವಳವ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಬಡಜನರು, ನಿರ್ಗತಿಕರಿಗಾಗಿ ಆಹಾರ ಸಂಗ್ರಹಣಾ ದಾಸ್ತಾನುಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡ ಅನೇಕ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಉಂಟಾಗಿರುವ ಬಿಕ್ಕಟ್ಟನ್ನು ಶಮನ ಮಾಡಲು ವಿಕೇಂದ್ರೀಕರಣ ಮಾರ್ಗ ಕಂಡುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೇ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸ್ಥಳೀಯವಾಗಿ ಶ್ರಮಿಸುತ್ತಿರುವ ಎಲ್ಲ ಜಿಲ್ಲಾಡಳಿತ, ಆರೋಗ್ಯ ಸಿಬ್ಬಂದಿಯನ್ನು ಅವರು ಹೊಗಳಿದರು. (ಏಜೆನ್ಸೀಸ್)