ಮುಂಬೈ/ಚೆನ್ನೈ: ಕರೊನಾ ಪೀಡಿತ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮೇ ಕೊನೆಯವರೆಗೆ ಲಾಕ್ಡೌನ್ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಮುಂದುವರಿಯಲಿದ್ದರೆ, ತಮಿಳುನಾಡಿನಲ್ಲಿ ಲಾಕ್ಡೌನ್ ನಿಯಮವನ್ನು ಒಂದಷ್ಟು ಸಡಿಲಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಂಬೈ, ಪುಣೆ, ಮಾಲೇಗಾಂವ್ ಮತ್ತು ಪಿಂಪ್ರಿ ಚಿಂಚವಾಡಾದ ಕೆಂಪು ವಲಯಗಳಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಪ್ರದೇಶಗಳಲ್ಲೇ ಅತಿಹೆಚ್ಚು ಕರೊನಾ ಸೋಂಕಿತರು ಇರುವುದು ಇದಕ್ಕೆ ಕಾರಣ. ಶನಿವಾರ ಅಥವಾ ಭಾನುವಾರ ಈ ಬಗ್ಗೆ ಅಧಿಕೃತ ಸೂಚನೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಕ್ರೀಡಾ ಕ್ಷೇತ್ರದಲ್ಲೂ ಮುತ್ತಪ್ಪ ರೈ ಸೈ…
ಮೇ 17ರ ನಂತರದಲ್ಲಿ ಲಾಕ್ಡೌನ್ ವಿಸ್ತರಣೆ ಕುರಿತು ನಿರ್ಧರಿಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ಸಚಿವ ಸಂಪುಟದ ಕೆಲ ಪ್ರಮುಖ ಸದಸ್ಯರೊಂದಿಗೆ ಗುರುವಾರ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಸಭೆಯ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ರವಾನಿಸಲಾಗಿದೆ.
ತಮಿಳುನಾಡು ಸರ್ಕಾರ ರಚಿಸಿರುವ ಅಧಿಕಾರಿಗಳ ಸಮಿತಿ ಮೇ 17ರ ನಂತರದ ವಿಸ್ತೃತ ಲಾಕ್ಡೌನ್ ಅವಧಿಯಲ್ಲಿ ಸಡಿಲಗೊಳಿಸಬಹುದಾದ ನಿಯಮಗಳು ಮತ್ತು ಪ್ರದೇಶಗಳ ಕುರಿತು ನಿರ್ಧರಿಸಿ, ಆ ವರದಿಯನ್ನು ಸಿಎಂ ಪಳನಿಸ್ವಾಮಿ ಅವರಿಗೆ ಸಲ್ಲಿಸಿದೆ. ಜತೆಗೆ ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆಯ ಮೇಲೆ ನಿಗಾವಹಿಸಲು ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.
ಒಂದು ಮೂಲದ ಪ್ರಕಾರ ವಿಸ್ತೃತ ಲಾಕ್ಡೌನ್ ಅವಧಿಯಲ್ಲೂ ಮಾಲ್, ಜಿಮ್, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಸುವ ಜತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ನಿರ್ಬಂಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಶೇ.50 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಕೈಗಾರಿಕೆಗಳಿಗೆ ಅನುಮತಿ ನೀಡಲಾಗುವುದು. ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ.