ಹೈದರಾಬಾದ್: ಕರೊನಾ ಕಿರಾತಕ ಆರೋಗ್ಯ ಮತ್ತು ಜೀವವನ್ನು ಕಿತ್ತುಕೊಳ್ಳುವುದರ ಜತೆ ಜತೆಗೆ ಬದುಕುಳಿದವರನ್ನೂ ಇನ್ನಿಲ್ಲದ ರೀತಿಯಲ್ಲಿ ಹಿಂಸಿಸುತ್ತಿದೆ.
ವೈರಸ್ ಹರಡುವಿಕೆ ತಪ್ಪಿಸಲು ಜಾರಿಯಾದ ಲಾಕ್‌ಡೌನ್ ಹಲವರ ತುತ್ತಿನ ಚೀಲ ಕಸಿದುಕೊಂಡಿದೆ. ಹೇಗಿದ್ದ ಬದುಕು ಹೇಗಾಗೋಯ್ತು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ.
ಇವರ ಹೆಸರು ಬಿ ಭಾಸ್ಕರ್. 12 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದವರು. ಕೊವಿಡ್ ನಿಂದಾಗಿ ಲಾಕ್‌ಡೌನ್ ಜಾರಿಯಾದ ನಂತರ ಕೆಲಸ ಕಳೆದುಕೊಂಡಿದ್ದಾರೆ.
ಈಗ ಅನ್ಲಾಕ್ ಆಗಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದ್ದರೂ ಅವರು ಶಿಕ್ಷಕ ವೃತ್ತಿಯನ್ನು ಅದನ್ನು ಬಿಟ್ಟು ತಮ್ಮ ಸ್ವಂತ ಊರಾದ ವಾರಂಗಲ್ (ಗ್ರಾಮೀಣ) ಗ್ರಾಮದಲ್ಲಿ ರಸ್ತೆ ಬದಿ ಆಹಾರ ಮಳಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ.
ಬಿಎಸ್ಸಿ ಪದವೀಧರರಾದ ಭಾಸ್ಕರ್, ಶಿಕ್ಷಕ ವೃತ್ತಿಯಲ್ಲಿ ಯಾವುದೇ ಭದ್ರತೆ ಇಲ್ಲದಿರುವುದರಿಂದ ತಾನು ಮತ್ತೆ ಈ ವೃತ್ತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರು ತಮ್ಮ ಹಳ್ಳಿಗೆ ಹಿಂತಿರುಗಿ ಇಡೀ ಜೀವನವನ್ನು ಅಲ್ಲಿಯೇ ಕಳೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರಾವೆಲ್ ಏಜೆಂಟ್ ಆತ್ಮಹತ್ಯೆಗೂ ವಿದ್ಯಾರ್ಥಿ ವೀಸಾಗೂ ಏನು ಸಂಬಂಧ? ಆತ್ಮಹತ್ಯೆ ಪತ್ರದಲ್ಲಿತ್ತು ನಾಲ್ವರ ಹೆಸರು
ನನ್ನ ಮಿರ್ಚಿ-ಬಜ್ಜಿ ಸ್ಟಾಲ್ ನಿರುಪಯುಕ್ತವಾದರೂ ನಾನು ಬೇರೆ ಯಾವುದಾದರೂ ಕೆಲಸ ಮಾಡುತ್ತೇನೆ ಹೊರತು ನಾನು ನಗರಕ್ಕೆ ಮತ್ತು ಬೋಧನಾ ವೃತ್ತಿಗೆ ಹಿಂತಿರುಗಲು ಬಯಸುವುದಿಲ್ಲ ಎಂದಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರೂ, ಬಿಕ್ಕಟ್ಟಿನ ಸಂದರ್ಭದಲ್ಲಿ ನನ್ನ ಉದ್ಯೋಗ ನನ್ನ ರಕ್ಷಣೆಗೆ ಬರಲಿಲ್ಲ. ಭದ್ರತೆಯಿಲ್ಲದ ಉದ್ಯೋಗ ಮಾಡಬೇಡಿ ಎಂದು ನಾನು ಜನರಿಗೆ ಸಲಹೆ ನೀಡುತ್ತೇನೆ. ನಾನು ಬಜ್ಜಿ, ಕುರುಕಲು ತಿಂಡಿ ತಯಾರಿಸಿ ಮಾರಾಟ ಮಾಡಿ ದಿನಕ್ಕೆ 500-600 ರೂ. ಗಳನ್ನು ಗಳಿಸುತ್ತಿದ್ದೇನೆ ಎಂದಿದ್ದಾರೆ.
ಈ ಮೊದಲು ಇವರು ಶಿಕ್ಷಕ ವೃತ್ತಿಯಲ್ಲಿದ್ದಾಗ ಮಾಸಿಕ 35,000 ರೂ.ಗಳಿಸುತ್ತಿದ್ದರು.
ಶಿಕ್ಷಕ ವೃತ್ತಿಯನ್ನು ತ್ಯಜಿಸಲು ನಿರ್ಧರಿಸಿದವರಲ್ಲಿ ಭಾಸ್ಕರ್ ಒಬ್ಬರೇ ಅಲ್ಲ. ಈ ವೃತ್ತಿಯ ಹೊರತಾಗಿ ಬೇರೆ ಹಲವು ಉತ್ತಮ ಕೆಲಸದಲ್ಲಿದ್ದವರೂ ಇಂಥ ನಿರ್ಧಾರ ಕೈಗೊಂಡಿದ್ದಾರೆ. ಲಾಕ್‌ಡೌನ್ ಜಾರಿಯಾಗಿ ಎಲ್ಲವೂ ಸ್ಥಗಿತಗೊಂಡಾಗ ಜೀವನೋಪಾಯಕ್ಕಾಗಿ ಕೃಷಿ ಅಥವಾ ಖಾಸಗಿ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: 12 ವರ್ಷಗಳ ಬಳಿಕ ಮನೆಗೆ ಮರಳಿದ ಬೆಕ್ಕು!
"ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿಗೆ ಸಂಬಳವಿಲ್ಲದೆ ಬದುಕುಳಿಯುತ್ತೇನೆ ಎಂಬ ವಿಶ್ವಾಸ ನನಗಿತ್ತು. ನಾನು ಮನೆ ಪಾಠ (ಟ್ಯೂಷನ್) ಮಾಡುವುದರಿಂದ COVID-19 ನನ್ನ ಮೇಲೆ ಆರ್ಥಿಕ ಪರಿಣಾಮ ಬೀರುವುದಿಲ್ಲ ಎಂದು ನನಗೆ ವಿಶ್ವಾಸವಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬದುಕು ಸುಗಮವಾಗಿ ಸಾಗುತ್ತಿತ್ತು. ಆದರೆ ಆಗಿದ್ದೇ ಬೇರೆ. ನಾನು ಜೂನ್ 3 ರಂದು ನಗರಕ್ಕೆ ಮರಳಿ ನನ್ನ ವಿದ್ಯಾರ್ಥಿಗಳನ್ನು ಸಂಪರ್ಕಿಸಿದೆ. ಆದರೆ, ಅವರೆಲ್ಲರೂ ಒಬ್ಬೊಬ್ಬರಾಗಿ, ಟ್ಯೂಷನ್ ಗೆ ಬರವುದನ್ನು ನಿಲ್ಲಿಸುವುದಾಗಿ ಹೇಳಿದರು. ಜೂನ್ ಅಂತ್ಯದ ವೇಳೆಗೆ ನನಗೆ ಜೀವನೋಪಾಯಕ್ಕೆ ಏನೂ ಇರಲಿಲ್ಲ ಎಂದು ಮತ್ತೊಬ್ಬ ಶಿಕ್ಷಕ ಪಿ.ನಾರಾಯಣ (ಗಣಿತ ಶಿಕ್ಷಕ) ತಿಳಿಸಿದ್ದಾರೆ. ಎಂಎಸ್ಸಿ ಪದವೀಧರರಾದ ನಾರಾಯಣ ತಿಂಗಳಿಗೆ 50,000 ರೂ. ಗಳಿಸುತ್ತಿದ್ದರು. ಆದರೆ ಇವರು ಈಗ ಕೃಷ್ಣಾ ಜಿಲ್ಲೆಯಲ್ಲಿ ರೈತನಾಗಿ ಕೆಲಸ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಜೀವನ ವೆಚ್ಚವು ನಗರಗಳಿಗಿಂತ ತೀರಾ ಕಡಿಮೆ ಮತ್ತು ಬಾಡಿಗೆ ಪಾವತಿಸುವ ಹೊರೆ ಇಲ್ಲ ಎಂದು ಅವರು ಹೇಳುತ್ತಾರೆ.