ಲಾಕ್ಡೌನ್ ಅವಧಿಯಲ್ಲಿ ಮಕ್ಕಳನ್ನು ಲಾಲಿಸಿ ಪಾಲಿಸುವುದೇ ತುಸು ತ್ರಾಸದಾಯಕ ಕೆಲಸ. ಮನೆಯಿಂದ ಮಕ್ಕಳನ್ನು ಹೊರ ಹೋಗದಂತೆ ತಡೆಯುವುದು, ಅವರ ಗಮನವನ್ನು ಸೆಳೆದಿಟ್ಟುಕೊಂಡು ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಸುವುದು ತುಸು ಕಷ್ಟವೇ. ಮಕ್ಕಳ ಮನಸ್ಸೂ ಅಷ್ಟೇ. ನಾಲ್ಕು ಗೋಡೆಯ ಮಧ್ಯೆ ಕೂರದು. ಹೊರಗೆ ಹೋಗಿ ಆಟ ಆಡಬೇಕು. ರಜಾಕಾಲದಲ್ಲಿ ಪ್ರಕೃತಿಯ ನಡುವೆ ಆಡುವ ಆಸೆ ಸಹಜವಾಗಿಯೆ ಇರುತ್ತದೆ. ತುಂಟ ಮಕ್ಕಳನ್ನು ಸಂಭಾಳಿಸುವುದು ಇನ್ನೂ ಕಷ್ಟ. ಪಾಲಕರು ಅವರನ್ನು ಸಂಭಾಳಿಸಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಫಿಲಿಪ್ಪೀನ್ನಲ್ಲಿ ತಂದೆಯೊಬ್ಬ ಕಂಡುಕೊಂಡ ದಾರಿ ಸಾಮಾಜಿಕ ಜಾಲತಾಣಗಳಲ್ಲಿ ಜನಮನಸೂರೆಗೊಂಡಿದೆ. ಟೀಕೆಗಳನ್ನೂ ಎದುರಿಸಿದೆ.
ಅಪ್ಪನಿಗೊಂದು ಐಡಿಯಾ ಹೊಳೆಯಿತು. ಅಲ್ಲೆಲ್ಲ ಇಂತಹ ಉಪಾಯಗಳು ಸಹಜವಾಗಿ ಚಾಲ್ತಿಯಲ್ಲಿದೆ. ತುಂಟ ಮಕ್ಕಳ ತುಂಟಾಟಿಕೆ ಕಡಿಮೆ ಮಾಡಲು ದೊಡ್ಡವರಂತೆ ಕಾಣುವ ಹೇರ್ಕಟ್ ಮಾಡಿಸುವ ಉಪಾಯವದು. ಕೂಡಲೇ ಮಗನನ್ನು ಹಿಡಿದಿಟ್ಟು, ತಲೆಕೂದಲು ಕತ್ತರಿಸಿ ಬಕ್ಕತಲೆಯವನಂತೆ ಮಾಡಿ ಬಿಟ್ಟರು. ಕನ್ನಡಿ ಹಿಡಿದು ತೋರಿಸಿ ಇನ್ನು ಹೊರಗೆ ಹೋಗು ಎಂದರು.
ಬಕ್ಕತಲೆ ನೋಡಿ ಬಾಲಕನಿಗೆ ಅಳುತಡೆಯಲಿಲ್ಲ. ಮನೆಯಿಂದ ಹೊರಗೆ ಕಾಲಿಡಲೂ ಇಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳನ್ನೂ ಎದುರಿಸಿವೆ. ಆದರೆ, ಮಗುವನ್ನು ಮುಜುಗರಕ್ಕೀಡುಮಾಡುವ ಈ ಪ್ರಯತ್ನಕ್ಕೆ ಈ ಸಂದರ್ಭದಲ್ಲಿ ಸಮರ್ಥನೆಯೂ ಸಿಗುತ್ತಿದೆ. (ಏಜೆನ್ಸೀಸ್)