ನ್ಯೂಸ್

ವಾರದ ಗಡುವು ಲಾಕ್​ಡೌನ್​ಗೆ ಒಲವು; ಉದಾಸೀನ ಮಾಡಿದರೆ ಮುಂಬೈ- ದೆಹಲಿ ಸ್ಥಿತಿ

vinaymk1969

ಬೆಂಗಳೂರು: ಕರೊನಾ ಸಾಂಕ್ರಾಮಿಕದಿಂದ ಜನರ ಸಾವಿನ ಪ್ರಮಾಣ ತಗ್ಗಿಸಬೇಕೆಂದರೆ ಲಾಕ್​ಡೌನ್ ಅನಿವಾರ್ಯ ಎಂಬ ತಜ್ಞರ ಅಭಿಪ್ರಾಯಕ್ಕೆ ಸರ್ಕಾರ ಒಲ್ಲೆ ಎಂದಿದೆ. ಇದೇ ವೇಳೆ, ಲಾಕ್​ಡೌನ್ ಸಾಧ್ಯವಿಲ್ಲವೆಂದಾದರೆ ಇನ್ನೊಂದು ವಾರ ಅಥವಾ 15 ದಿನದೊಳಗೆ ಪರಿಸ್ಥಿತಿ ನಿಯಂತ್ರಿಸಿ. ಇಲ್ಲವಾದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ತಜ್ಞರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

3-4 ದಿನಗಳಿಂದ ತಜ್ಞ ವೈದ್ಯರು ಹಾಗೂ ಅಧಿಕಾರಿಗಳು ಸರ್ಕಾರದ ವಿವಿಧ ಹಂತದಲ್ಲಿ ಸಭೆ ನಡೆಸಿ, ಮುಂದಾಗಬಹುದಾದ ಅಪಾಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮತ್ತೆ ಲಾಕ್​ಡೌನ್ ಆಗಬಾರದೆಂದರೆ ಇನ್ನೊಂದು ವಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ನಿಯಂತ್ರಣ ಕ್ರಮಕೈಗೊಳ್ಳಿ. ಕರ್ನಾಟಕದಲ್ಲಿ ಈಗಿನ ಹರಡುವಿಕೆ ಪ್ರಮಾಣ ಇತರ ಮಹಾನಗರಗಳಿಗೆ ಹೋಲಿಸಿದರೆ ಕಡಿಮೆ ಎನಿಸಬಹುದು, ಆಗಸ್ಟ್ ಅಂತ್ಯ- ಸೆಪ್ಟೆಂಬರ್​ಗೆ ಅತಿ ಎನಿಸಬಹುದಾದ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂಬ ಅಂದಾಜಿನ ಎಚ್ಚರಿಕೆ ವರದಿಯೂ ಸರ್ಕಾರದ ಕೈ ಸೇರಿದೆ. ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ 2 ತಿಂಗಳ ಬಳಿಕ ಆಪತ್ತು ಕಟ್ಟಿಟ್ಟಬುತ್ತಿ ಎಂದೇ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೆಂಗಳೂರು ಹೊರತುಪಡಿಸಿ ಉಳಿದೆಡೆ ನಿಯಂತ್ರಿಸಬಹುದು. ಸೋಂಕು ಹರಡುವಿಕೆ ತಡೆಯಲು ಸೀಲ್​ಡೌನ್ ಎಷ್ಟು ಪರಿಣಾಮಕಾರಿ ಆಗಬಹುದು, ಲಾಕ್​ಡೌನ್ ಆದರೆ ಒಮ್ಮೆ ಬರುವ ಪ್ರಕರಣಗಳನ್ನೆಲ್ಲ ಪತ್ತೆ ಮಾಡಿ ಕ್ವಾರಂಟೈನ್ ಮಾಡಿದರೆ ಉಳಿದ ಕಡೆ ಹಬ್ಬುವುದು ತಡೆಯಬಹುದು. ಕನಿಷ್ಠ 15 ದಿನವಾದರೂ ಲಾಕ್​ಡೌನ್ ಆಗಬೇಕು, ರ್ಯಾಂಡಮ್ ಟೆಸ್ಟ್ ಹೆಚ್ಚಾಗಬೇಕು, ಒಟ್ಟು ಟೆಸ್ಟ್ ಪ್ರಮಾಣ ಹೆಚ್ಚಾಗಬೇಕು ಎಂಬ ಸಲಹೆಗಳು ಸರ್ಕಾರಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಅಂತರ ರಾಜ್ಯ ಓಡಾಟ 2-3 ವಾರ ನಿರ್ಬಂಧವಾಗಬೇಕು, ಅಂತರ ಜಿಲ್ಲಾ ಓಡಾಟ ನಿಯಂತ್ರಣವಾಗಬೇಕು, ಬೆಂಗಳೂರು ನಗರದ ಜನದಟ್ಟಣೆ ಇನ್ನಷ್ಟು ಕಡಿಮೆ ಆಗಬೇಕು, ಹೋಂ ಕ್ವಾರಂಟೈನ್ ಪಾಲನೆ ಸರಿಯಾಗಿ ಆಗುತ್ತಿಲ್ಲ, ಅದರ ಬಗ್ಗೆ ಗಮನವಹಿಸಬೇಕು, ಖಾಸಗಿ ಆಸ್ಪತ್ರೆ ಪರಿಗಣಿಸದೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು, ಹಳ್ಳಿಗಳಲ್ಲಿ ಕರೊನಾ ಹರಡಿಲ್ಲ. ಅಲ್ಲಿ ಹರಡದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದೂ ತಜ್ಞರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಕಾರ್ಯಪಡೆ ಸಭೆ ಇಂದು: ನಿಗದಿಪಡಿಸಿದ ದರಕ್ಕೆ ಕರೊನಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪದಿರುವುದು ಸರ್ಕಾರಕ್ಕೆ ತಲೆಬಿಸಿಯಾಗಿದೆ. ಸೋಮವಾರ ನಡೆಯಲಿರುವ ಕಾರ್ಯಪಡೆ ಸಭೆಯಲ್ಲಿ ರ್ಚಚಿಸಿ ಮನವೊಲಿಕೆ ಪ್ರಯತ್ನ ಮಾಡಲಿದೆ. ಇಲ್ಲವಾದರೆ ವಿಪತ್ತು ನಿಯಂತ್ರಣ ಕಾಯ್ದೆ ಅಸ್ತ್ರ ಪ್ರಯೋಗಿಸುವುದು ನಿಚ್ಚಳವಾಗಿದೆ. ಈ ಸಂಬಂಧ ಆದೇಶವೂ ಸಿದ್ಧವಾಗಿದೆ. ಜು.5ರಿಂದ ಪ್ರಾರಂಭವಾಗಲಿರುವ ಪ್ರತಿ ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾರ್ಗಸೂಚಿ ಸೇರಿ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಲಿವೆ. ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮತ್ತು ಮುಖ್ಯಸ್ಥರ ಜತೆಗೆ ರ್ಚಚಿಸಲು ಮುಖ್ಯಮಂತ್ರಿ ಸೋಮವಾರ ಸಭೆ ಕರೆದಿದ್ದಾರೆ.