ಸೋರಲಮಾವು ಶ್ರೀಹರ್ಷ ತುಮಕೂರು
ನೊಂದ ಮಹಿಳೆಯ ಅಳಲು ಕೇಳಿ ಆಕೆಗೆ ಕಾನೂನು ಪರಿಹಾರ ಕೊಡಿಸುತ್ತಿರುವ ರಾಜ್ಯದ ಎಲ್ಲ ‘ಸಾಂತ್ವನ ಕೇಂದ್ರ’ಗಳನ್ನು ಮುಚ್ಚಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.
ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಆಪ್ತಸಮಾಲೋಚನೆ ನಡೆಸಿ, ತಾತ್ಕಾಲಿಕ ಆಶ್ರಯ ನೀಡಿ ಅವರ ಪಾಲಿನ ತವರುಮನೆ ಎನಿಸಿಕೊಂಡಿದ್ದ ಸಾಂತ್ವನ ಕೇಂದ್ರಗಳು, ಹೆರಿಗೆ ಸಂದರ್ಭದಲ್ಲಿ ಸಹಾಯಕವಾಗಲೆಂದು ಆರಂಭಿಸಲಾಗಿದ್ದ ಮಾತೃಶ್ರೀ ಯೋಜನೆಯ ಹೊಣೆಯನ್ನು ಹೊತ್ತಿದ್ದವು. ಪ್ರತಿ ತಾಲೂಕಿನಲ್ಲಿಯೂ ಸರ್ಕಾರದ ನೆರವಿನೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೇಂದ್ರದ ನಿರ್ವಹಣೆ ಹೊಣೆ ಹೊತ್ತಿವೆ. 2001ರಲ್ಲಿ ಆರಂಭವಾದ ಈ ಯೋಜನೆಗೆ ರಾಜ್ಯ ಸರ್ಕಾರ ವಾರ್ಷಿಕ 10 ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 196 ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲೂ 5 ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಆರ್ಥಿಕ ಹೊರೆ ಕಾರಣ ನೀಡಿ ಸಾಂತ್ವಾನ ಕೇಂದ್ರಗಳನ್ನು ಮುಚ್ಚಲು ಆದೇಶ ನೀಡಿದ್ದು, ಸಾವಿರಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಳ್ಳಲಿದ್ದಾರೆ.
ಮುಚ್ಚಲು ಕಾರಣ: ಸಾಂತ್ವನ ಕೇಂದ್ರದ ಮಾದರಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರದಲ್ಲಿ ‘ಸಖಿ’ ಯೋಜನೆ ಜಾರಿಗೊಳಿಸಿದ್ದು, ಆಯಾ ಜಿಲ್ಲೆಯ ಜನರು ಕಷ್ಟ ಹೇಳಿಕೊಳ್ಳಬಹುದು. ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರ ಆರಂಭವಾಗಲಿದ್ದು, ಪೊಲೀಸ್, ನ್ಯಾಯಾಲಯ, ಸರ್ಕಾರದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ.
ಸರ್ಕಾರ ಆರ್ಥಿಕ ಹೊರೆ ತಗ್ಗಿಸಲು ಯೋಜನೆ ರೂಪಿಸಿದೆಯಾದರೂ ಹಳ್ಳಿಗಳಲ್ಲಿ ತೊಂದರೆಗೆ ಸಿಲುಕುವ ಮಹಿಳೆಯರು ಜಿಲ್ಲಾ ಕೇಂದ್ರಗಳಿಗೆ ಬಂದು ನೋವು ಹೇಳಿಕೊಳ್ಳುವುದು ಕಷ್ಟವಾಗಲಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರನ್ನೂ ಕೆಲಸದಿಂದ ತೆಗೆಯದಂತೆ ಕಾರ್ವಿುಕ ಇಲಾಖೆ ಆದೇಶಿಸಿದ್ದು, ಸಾಂತ್ವನ ಕೇಂದ್ರದ ಹೊಣೆ ಹೊತ್ತಿದ್ದ ಸರ್ಕಾರೇತರ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ.
ಅಂಗನವಾಡಿಗಳ ಉನ್ನತೀಕರಣ
ಹೆರಿಗೆ ಸಂದರ್ಭದಲ್ಲಿ ಬಡ ಮಹಿಳೆಯರಿಗೆ ಅನುಕೂಲವಾಗಲೆಂದು ಆರಂಭಿಸಲಾಗಿದ್ದ ‘ಮಾತೃಶ್ರೀ’ ಯೋಜನೆಯನ್ನು ಈ ವರ್ಷದಿಂದ ರದ್ದುಪಡಿಸಲಾಗಿದೆ. ಈ ಯೋಜನೆಯಡಿ 6 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಮಾತೃ ವಂದನಾ ಕಾರ್ಯಕ್ರಮದ ಅಡಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ 5000 ರೂ. ನೀಡಲಾಗುತ್ತಿದ್ದು, ಈ ಯೋಜನೆಗೆ ರಾಜ್ಯ ತನ್ನ ಪಾಲಿನ ಶೇ.40 ಹಣ ನೀಡಬೇಕಿರುವ ಹಿನ್ನೆಲೆಯಲ್ಲಿ 2018ರಲ್ಲಿ ಆರಂಭಗೊಂಡಿದ್ದ ಮಾತೃಶ್ರೀ ಯೋಜನೆ ಸ್ಥಗಿತಗೊಳಿಸಲಾಗುತ್ತಿದ್ದು, ಬೊಕ್ಕಸಕ್ಕೆ ನೂರಾರು ಕೋಟಿ ರೂ. ಉಳಿತಾಯವಾಗಲಿದೆ. ಭಾಗ್ಯಲಕ್ಷ್ಮೀ ಯೋಜನೆಯನ್ನು ಜೀವವಿಮಾ ನಿಗಮದ ಬದಲು ಅಂಚೆ ಇಲಾಖೆ ಜತೆ ಒಪ್ಪಂದ ಮಾಡಿಕೊಂಡು ಮರು ವಿನ್ಯಾಸಗೊಳಿಸಿ ಜಾರಿಗೊಳಿಸಲು ತೀರ್ವನಿಸಲಾಗಿದೆ. ನಗರ ಪ್ರದೇಶದ ಅಂಗನವಾಡಿಗಳ ಉನ್ನತೀಕರಣಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.