ನ್ಯೂಸ್

ಲಾಕ್​ಡೌನ್​ ನಿಯಮ ಸಡಿಲ: ಕೃಷಿ, ಪ್ಯಾಕೇಜಿಂಗ್​, ರಿಯಲ್​ ಎಸ್ಟೇಟ್​ಗೆ ಮಧ್ಯರಾತ್ರಿಯಿಂದಲೇ ಅನುಮತಿ

kumarvrl

ಬೆಂಗಳೂರು: ರಾಜ್ಯ ಸರ್ಕಾರ ಲಾಕ್​ಡೌನ್​ ನಿಯಮವನ್ನು ಸಡಿಲಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಸೂಚಿಸಿರುವ ಚಟುವಟಿಕೆಗಳಿಗೆ ಮಧ್ಯರಾತ್ರಿಯಿಂದಲೇ ಅವಕಾಶ ಕಲ್ಪಸಿದೆ.

ಕೃಷಿ ಚಟುವಟಿಕೆ, ಕೊರಿಯರ್​ ಸೇವೆ, ನಿರ್ಮಾಣ ಕಾಮಗಾರಿ ಹಾಗೂ ಪ್ಯಾಕೇಜಿಂಗ್​ ವಸ್ತುಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ. ಈ ನಿಯಮಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್​ ತಿಳಿಸಿದ್ದಾರೆ.

ಸಾರ್ವಜನಿಕರ ಸಾರಿಗೆ ಸಂಚಾರವನ್ನು ಮೇ.3ರವರೆಗೆ ನಿರ್ಬಂಧಿಸಲಾಗಿದೆ. ಪಾಸು ಹೊಂದಿರುವ ಖಾಸಗಿ ವಾಹನಗಳು ಸಂಚರಿಸಬಹುದಾಗಿದೆ.

ತುರ್ತು ಆರೋಗ್ಯ ಸೇವೆಯ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಯಾವುದಕ್ಕೆ ರಿಯಾಯಿತಿ: ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಔಷಧಿ, ವೈದ್ಯಕೀಯ ಉತ್ಪನ್ನಗಳು, ಔಷಧಿಯ ಕಚ್ಚಾ ವಸ್ತು ತಯಾರಿಕೆಗೆ ಅನುಮತಿ ಕಲ್ಪಿಸಲಾಗಿದೆ.

ಆಹಾರ ಸಂಸ್ಕರಣಾ ಕೈಗಾರಿಕೆಗಳು, ಕಲ್ಲಿದ್ದಲು ಉತ್ಪಾದನೆ. ಗಣಿಗಾರಿಕೆ ಹಾಗೂ ಪ್ಯಾಕೇಜಿಂಗ್​ ಘಟಕಗಳು ಕೂಡ ಕಾರ್ಯನಿರ್ವಹಿಸಲಿವೆ.

ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣ , ಕೈಗಾರಿಕಾ ಯೋಜನೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದ ಕೈಗಾರಿಕೆಗಳು ಆರಂಭಗೊಳ್ಳಲಿವೆ. ಆದರೆ ಕಾರ್ಮಿಕರನ್ನು ಹೊರಗಡೆಯಿಂದ ಕರೆ ತರಬಾರದು ಎಂದು ಸೂಚನೆ ನೀಡಲಾಗಿದೆ. ಸ್ಥಳದಲ್ಲೇ ಲಭ್ಯ ಇರುವ ಕಾರ್ಮಿಕರನ್ನು ಬಳಸಿಕೊಂಡು ಆರಂಭಿಸಬೇಕು ಎಂದು ಸೂಚಿಸಲಾಗಿದೆ.

ಎಲೆಕ್ಟ್ರಿಕಲ್ಸ್​, ಪ್ಲಂಬರ್ಸ್​, ಮೊಬೈಲ್​ ರಿಪೇರಿ, ಯಂತ್ರಗಳ ರಿಪೇರಿ, ಬಡಗಿಗಳ ಸೇವೆಗೆ ಅನುಮತಿ ನೀಡಲಾಗಿದೆ.

ಲಾಕ್​ಡೌನ್​ ನಂತರ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಸರ್ಕಾರದ ವರಮಾನಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನಿಡಲು ಕೆಲವು ನಿಯಮಗಳನ್ನು ಸಡಿಲಿಸಲಾಗಿದೆ.

ಮೇ.3ರವರೆಗೆ ಮೆಟ್ರೋ ರೈಲು, ರೈಲು, ಬಸ್​, ವಿಮಾನ ಸಂಚಾರ ಇರುವುದಿಲ್ಲ. ಅಲ್ಲದೆ ಹೋಟೆಲ್, ರೆಸ್ಟೋರೆಂಟ್​, ಬಾರ್​, ಮಾಲ್​, ಚಿತ್ರಮಂದಿರಗಳು ತೆರೆಯುವುದಿಲ್ಲ.