ನಿವೇಶನ ನಿರ್ಮಿಸಿರುವ ಸ್ಥಳದ ಸನಿಹದಲ್ಲೇ ಇರುವ ಪುರಾತನ ಕಲ್ಯಾಣಿ 
ನ್ಯೂಸ್

ಸಂಶೋಧನಾ ಸ್ಥಳದಲ್ಲಿ ನಿವೇಶನ: ಆಕ್ಷೇಪ

ಅರವಿಂದ ಅಕ್ಲಾಪುರ

ಶಿವಮೊಗ್ಗ: ತಾಲೂಕಿನ ಹಾರನಹಳ್ಳಿ ಹೋಬಳಿಯ ನಾಗರಬಾವಿಯಲ್ಲಿ ಅನೇಕ ಧಾರ್ಮಿಕ ಹಾಗೂ ಕೆಳದಿ ಕಾಲದ ಐತಿಹಾಸಿಕ ಕುರುಹುಗಳಿವೆ. ಇದು ಸಂಶೋಧನೆ ನಡೆಸಬೇಕಾದ ಸ್ಥಳವಾಗಿದ್ದರೂ ಈ ಜಾಗದಲ್ಲಿ ಗ್ರಾಪಂನಿಂದ ನಿವೇಶನ ರೂಪಿಸಲಾಗಿದೆ ಎಂದು ನಾಗರಬಾವಿ ಬಸವಣ್ಣ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿವೇಶನಕ್ಕಾಗಿ ಬೇರೆ ಕಡೆ ಜಾಗ ಗುರುತಿಸಿ, ಈ ಜಾಗವನ್ನು ಸಂರಕ್ಷಿಸಬೇಕೆಂದು ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳಾದ ಕೆ.ಜಿ.ಸಂಗಮೇಶ, ಎನ್.ಸಿ.ಕುಬೇರಪ್ಪ, ಎಂ.ಮಲ್ಲಿಕಾರ್ಜುನ, ಎಸ್.ಎಂ.ಶಿವಕುಮಾರ್, ಎಸ್.ಎಂ.ಜಗನ್ನಾಥ, ಸದಾಶಿವಪ್ಪ, ಜೆ.ಪಿ.ಪರಮೇಶ, ಮಹೇಶ್ವರಪ್ಪ, ಕೋರೆ ಅಣ್ಣೋಜಿ ರಾವ್ ಒತ್ತಾಯಿಸಿದ್ದಾರೆ.
ಕೆಳದಿ ಅರಸರ ಕಾಲದ ಐತಿಹಾಸಿಕ ಹಾಗೂ ಧಾರ್ಮಿಕವಾದ ಪ್ರಮುಖ ಸ್ಥಳವಾಗಿದ್ದು ಬಸವಣ್ಣ ದೇವರು, ನಾಗ ದೇವತೆಗಳು, ರಾಮ ದೇವರ ದೇವಸ್ಥಾನಗಳಿರುವ ಕುರುಹುಗಳಿವೆ. ಪಂಚಲಿಂಗ ಕಲ್ಲಿನಬಾವಿ ಹಾಗೂ ಕಲ್ಯಾಣಿ ಇದೆ. ಈ ಜಾಗದ ಸುತ್ತಲೂ ಲಿಂಗಮುದ್ರೆ ಕಲ್ಲುಗಳಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಳದಿ ರಾಜರ ಕಾಲದಲ್ಲಿ ಈ ಜಾಗ ಪ್ರಮುಖ ಧರ್ಮಕ್ಷೇತ್ರವಾಗಿದ್ದ ಕುರುಹುಗಳು ಕಾಲಗರ್ಭದಲ್ಲಿ ಅಡಗಿಹೋಗಿವೆ. ಈ ಸ್ಥಳವನ್ನು ಉತ್ಖನನ ಮಾಡಿ ಸಂರಕ್ಷಿಸಿ ಇತಿಹಾಸದ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದು, ಈ ಸ್ಥಳದ ಕುರಿತು ಪರಿಶೀಲಿಸಲು ಆದೇಶಿಸಿದ್ದಾರೆ. ಶೀಘ್ರ ಪುರಾತತ್ವ ಇಲಾಖೆಯವರು ಸಂಶೋಧನೆ ಕೈಗೊಂಡು ಇಲ್ಲಿರುವ ಶಿಲಾಶಾಸನಗಳು, ಪುರಾತನ ದೇವಾಲಯಗಳನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.