ಶಿವಮೊಗ್ಗ ಎಲ್‌ಬಿಎಸ್ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಚ್.ಎಸ್.ಸುಂದರೇಶ್ ಗುದ್ದಲಿ ಪೂಜೆ ನೆರವೇರಿಸಿದರು. ಎಸ್.ಎನ್.ಚನ್ನಬಸಪ್ಪ, ವಿಶ್ವನಾಥ ಮುದಜ್ಜಿ, ನಾಗರಾಜ್, ಪಂಚಪ್ಪ, ಇ.ವಿಶ್ವಾಸ್ ಮುಂತಾದವರಿದ್ದರು.  
ನ್ಯೂಸ್

ಭೂಮಿ ನೀಡಿದವರಿಗೆ ಕಡಿಮೆ ದರದಲ್ಲಿ ನಿವೇಶನ:ಸುಂದರೇಶ್

ಶಿವಮೊಗ್ಗ: ಕಳೆದ 14 ವರ್ಷಗಳಿಂದೀಚೆಗೆ ಸೂಡಾ(ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ಸಾರ್ವಜನಿಕರಿಗೆ ನಿವೇಶನ ಹಂಚಲು ಸಾಧ್ಯವಾಗಿಲ್ಲ. ನಗರದ 10 ಕಿಮೀ ವ್ಯಾಪ್ತಿಯಲ್ಲಿ ಹೊಸದಾಗಿ ಬಡಾವಣೆ ನಿರ್ಮಾಣ ಮಾಡಲು ಭೂಮಿಯ ಕೊರತೆಯಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು

ಎಲ್‌ಬಿಎಸ್ ನಗರದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿವಮೊಗ್ಗ ಹಾಗೂ ಭದ್ರಾವತಿ ವ್ಯಾಪ್ತಿಯಲ್ಲಿ ರೈತರೊಂದಿಗೆ ಚರ್ಚಿಸಿ ಭೂಮಿ ಪಡೆಯುವ ಪ್ರಕ್ರಿಯೆ ಆರಂಭಿಸಲಾಗುವುದು. ಸೂಡಾದಿಂದ ಶಿವಮೊಗ್ಗ ಭದ್ರಾವತಿ ಜನರಿಗೆ ಕಡಿಮೆ ದರದಲ್ಲಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ವಿವಿಧ ಬಡಾವಣೆಗಳ ಜಂಕ್ಷನ್ ಅಭಿವೃದ್ಧಿ, ರಸ್ತೆಗಳಿಗೆ ನಾಮಫಲಕ ಅಳವಡಿಕೆ, ಉದ್ಯಾನವನ ಅಭಿವೃದ್ಧಿ, ಸೇವಾ ರಸ್ತೆಗಳ ಅಭಿವೃದ್ಧಿ, ಕಾಂಕ್ರಿಟ್ ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು 17.02 ಲಕ್ಷ ರೂ. ಮೊತ್ತದ 34 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿಗೆ ಕೆಲವೊಮ್ಮೆ ಕಾನೂನು ತೊಡಕು, ಅನುದಾನದ ಸಮಸ್ಯೆಯಿಂದ ಹಿನ್ನಡೆಯಾಗುತ್ತದೆ. ಊರುಗಡೂರು ಹಾಗೂ ಜೆಎಚ್ ಪಟೇಲ್ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಆರಂಭಿಸಲಾಗುವುದು. ಊರುಗಡೂರಿನಲ್ಲಿ 500ಕ್ಕೂ ಹೆಚ್ಚು ನಿವೇಶನ ಹಂಚಿಕೆಗೆ ಜೂನ್‌ನಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸೂಡಾ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಕಾರ್ಯಕ್ರಮದಲ್ಲೇ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ 34 ಕಾಮಗಾರಿಗಳು ಆರಂಭವಾಗಬೇಕು. ಗುಣಮಟ್ಟದ ಜತೆಗೆ ಕಾಮಗಾರಿ ನಡೆಸಬೇಕು. ಮುಂದೆ ಸಮಪರ್ಕವಾಗಿ ನಿರ್ವಹಣೆ ಮಾಡಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಇ.ವಿಶ್ವಾಸ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಸೂಡಾ ಎಇಇ ಬಸವರಾಜಪ್ಪ, ಎಲ್‌ಬಿಎಸ್ ನಗರ ನಿವಾಸಿಗಳ ಸಂಘದ ಪಂಚಪ್ಪ ಮುಂತಾದವರಿದ್ದರು.