ಸಾಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 6ನೇ ಇತಿಹಾಸ ಸಮ್ಮೇಳನವನ್ನು ಓಲೆಗರಿ ಹಸ್ತಪ್ರತಿಯನ್ನು ತೆರೆಯುವ ಮೂಲಕ ತುಮಕೂರು ವಿವಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಂ.ಕೊಟ್ರೇಶ್ ಉದ್ಘಾಟಿಸಿದರು. ಡಾ. ಕೆ.ಪ್ರಭಾಕರ ರಾವ್, ಡಾ. ಕೆ.ಜಿ.ವೆಂಕಟೇಶ್, ಡಾ. ವೆಂಕಟೇಶ್ ಜೋಯಿಸ್, ಹುಲಿಮನೆ ಗಣಪತಿ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಇತರರಿದ್ದರು. 
ನ್ಯೂಸ್

ಸ್ಥಳೀಯ ಚರಿತ್ರೆ ದಾಖಲಾತಿ ಅವಶ್ಯ

ಸಾಗರ: ದೇಶ, ರಾಜ್ಯದ ಇತಿಹಾಸವನ್ನು ನಾವು ಅಧ್ಯಯನ ಮಾಡುತ್ತೇವೆ. ಆದರೆ ನಾವು ಬಾಳಿ ಬದುಕುತ್ತಿರುವ ಪ್ರದೇಶದ ಇತಿಹಾಸವೇ ನಮಗೆ ತಿಳಿದಿರುವುದಿಲ್ಲ. ಸ್ಥಳೀಯ ಇತಿಹಾಸ ದಾಖಲಿಸುವುದು ಮತ್ತು ಅದರ ಬಗ್ಗೆ ಪದೇಪದೇ ಚರ್ಚೆ ಮಾಡುವುದು ತೀರ ಅಗತ್ಯ ಪ್ರಾಧ್ಯಾಪಕ ಹಾಗೂ 6ನೇ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕೆ.ಪ್ರಭಾಕರ ರಾವ್ ಹೇಳಿದರು.

ಸಾಗರ ನಗರಸಭೆ ರಂಗಮಂದಿರದಲ್ಲಿ ಭಾನುವಾರ ತಾಲೂಕು ಇತಿಹಾಸ ವೇದಿಕೆ, ಕೆಳದಿ ರೀಸರ್ಚ್ ಫೌಂಡೇಶನ್, ಸಹೃದಯ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ತಾಲೂಕು ಮಟ್ಟದ 6ನೇ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಇತ್ತೀಚೆಗೆ ಇತಿಹಾಸದ ಬಗ್ಗೆ ನಿಷ್ಕಾಳಜಿ ಜಾಸ್ತಿಯಾಗಿದೆ. ಆದರೆ ರಾಜ್ಯದಲ್ಲಿಯೇ ಸಾಗರ ತಾಲೂಕು ಇತಿಹಾಸವನ್ನು ದಾಖಲಿಸುವ, ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿದೆ. ಸಾಗರ ತಾಲೂಕಿನ ಇತಿಹಾಸ ಕುರಿತು ಅನೇಕ ಕೃತಿಗಳು ಬಂದಿವೆ. ಜತೆಗೆ ತಾಲೂಕಿನ ಸ್ಥಳನಾಮಗಳು, ಐತಿಹ್ಯಗಳ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯ ಎಂದರು.

ನಮ್ಮ ಪ್ರದೇಶದಲ್ಲಿ ಕೆಳದಿ ಅರಸರ ಕುರಿತು ಸಾಕಷ್ಟು ಕೆಲಸಗಳು ನಡೆದಿವೆ. ನಡೆದಾಡುವ ವಿಶ್ವಕೋಶ ಎನಿಸಿಕೊಂಡ ಗುಂಡಾ ಜೋಯಿಸ್ ಅವರು ಮಾಡಿದ ಕೆಲಸ ಬಹುದೊಡ್ಡದು. ಸ್ಥಳೀಯ ಇತಿಹಾಸ ಕುರಿತು ಸಾಕಷ್ಟು ಬಿಡಿ ಬರಹಗಳು ಕೂಡ ನಮ್ಮಲ್ಲಿ ದಾಖಲಾಗಿವೆ. ಡಾ. ನಾ.ಡಿಸೋಜ, ಅಂಬ್ರೆಯಮಠ ಅರುಣ್‌ಪ್ರಸಾದ್, ವಿಲಿಯಂ ಒಳಗೊಂಡಂತೆ, ಜಿಲ್ಲೆಯ ಪತ್ರಕರ್ತರು ಇತಿಹಾಸದ ಮೇಲೆ ಬೆಳಕು ಚೆಲುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಗಣೇಶ್ ರಾವ್ ಹಳೇ ಇಕ್ಕೇರಿ ಇವರ ಸಂಪಾದಕತ್ವದ ‘ಐತಿಹಾಸಿಕ ಹಿನ್ನೆಲೆಯಲ್ಲಿ ಇಕ್ಕೇರಿ’, ಸಾಗರದ ಸಹನಾ ಅವರು ಹೊರತಂದಿರುವ ‘ಶ್ರೀ ಮಹಾಗಣಪತಿ ದೇವಾಲಯದ ದಂಡೆಯ ಮೇಲಿನ ಇತಿಹಾಸ’ ಪುಸ್ತಕಗಳು ಸ್ಥಳೀಯ ಇತಿಹಾಸವನ್ನು ಇಟ್ಟುಕೊಂಡು ಮಾಡಿರುವ ಪ್ರಾಯೋಗಿಕ ಪ್ರಯತ್ನ. ಇಂತಹ ಪ್ರಯತ್ನಗಳು ಹೆಚ್ಚಾಗಬೇಕು. ಐತಿಹಾಸಿಕ ಸಂಶೋಧನೆಗಳು ಪಂಡಿತರು, ಸಂಶೋಧಕರ ಆಸ್ತಿಯೇನಲ್ಲ. ಪ್ರತಿಯೊಬ್ಬರೂ ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕು ಎಂದರು.

ಸಾಗರ ತಾಲೂಕು ರಾಜರ ಆಳ್ವಿಕೆ ಕಾಲದಿಂದಲೂ ತನ್ನದೇ ಆದ ವಿಶೇಷತೆ ಇಟ್ಟುಕೊಂಡಿದೆ. ಡಾ. ಜಿ.ವಿ.ಕಲ್ಲಾಪುರ್, ಡಾ. ವೆಂಕಟೇಶ್ ಜೋಯಿಸ್, ವಿದ್ವಾನ್ ಗಣಪತಿ ಹುಲಿಮನೆ ಹೀಗೆ ಅನೇಕ ಸಂಶೋಧಕರು ಸ್ಥಳೀಯ ಇತಿಹಾಸವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೈಗಾರೀಕರಣದಿಂದಾದ ವಲಸೆ ಮತ್ತು ನಗರೀಕರಣ ಜನರನ್ನು ತಾವು ಕಳೆದುಕೊಂಡ ಅಸ್ಮಿತೆಯನ್ನು ಹುಡುಕುವಂತೆ ಮಾಡಿದೆ. ಇಂತಹ ಸಮ್ಮೇಳನಗಳು ಪ್ರಾದೇಶಿಕ ವಿಚಾರಗಳ ಸಂಶೋಧನೆಗೆ ಭಾಷ್ಯ ಬರೆಯುವುದಂತೂ ಸತ್ಯ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಹುಲಿಮನೆ ಗಣಪತಿ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ನಗರಸಭೆ ಮಾಜಿ ಸದಸ್ಯ ಕೆ.ಸಿದ್ದಪ್ಪ, ಎಸ್.ಬಸವರಾಜ್, ಟಿ.ಪ್ರಸನ್ನ , ಲೋಕೇಶ್‌ಕುಮಾರ್ ಇತರರಿದ್ದರು.