ನ್ಯೂಸ್

ಶೋಷಿತರ ಸಬಲೀಕರಣಕ್ಕೆ ಸಾಲ ಯೋಜನೆ; ಬ್ಯಾಂಕ್​ಗಳು ಅರ್ಜಿ ತಿರಸ್ಕರಿಸಿದರೆ ನಿಗಮದಿಂದಲೇ ಆರ್ಥಿಕ ಸಹಾಯ

ಬೆಂಗಳೂರು: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಶೋಷಿತರಿಗೆ ಸಕಾಲಕ್ಕೆ ಪುನರ್ವಸತಿ ಮತ್ತು ಪರಿಹಾರ ಸಿಗುತ್ತಿಲ್ಲ ಎಂಬ ಕೊರಗು ನಿವಾರಿಸಲು ಸರ್ಕಾರ ಮುಂದಾಗಿದೆ. ಉದ್ಯಮ, ಸೇವೆ, ವ್ಯಾಪಾರ ಯೋಜನೆಯಡಿ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್​ಗಳು ತಿರಸ್ಕರಿಸಿದರೂ ಪರಿಶಿಷ್ಟ ಜಾತಿ ಸಂತ್ರಸ್ತರು ಇನ್ನು ಹೆದರಬೇಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೇ ಸಹಾಯಧನದ ಜತೆಗೆ ನೇರ ಸಾಲ ಸೌಲಭ್ಯವೂ ದೊರೆಯಲಿದೆ. ಜಿಲ್ಲಾಧಿಕಾರಿ ಹಂತದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ದಲಿತ ಸಂಘಟನೆಗಳ ಧರಣಿಗೆ ಸರ್ಕಾರ ಸ್ಪಂದಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಏ.12ರಂದು ಈ ಕುರಿತು ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ತಲಾ 25 ಸಾವಿರ ರೂ. ನಿಗಮದ ಸಹಾಯಧನ ಹಾಗೂ ನೇರ ಸಾಲ ಬದಲಾಯಿಸಿ, ತಲಾ 50 ಸಾವಿರ ರೂ. ಸಹಾಯಧನ ಮತ್ತು ನೇರ ಸಾಲ
  • ಉದ್ಯಮಶೀಲತಾ ಯೋಜನೆಯಡಿ ತಲಾ ಒಂದು ಲಕ್ಷ ರೂ. ಸಹಾಯಧನ ಹಾಗೂ ಬ್ಯಾಂಕ್ ಸಾಲ ಬದಲಾಗಿ ನಿಗಮದಿಂದ ತಲಾ ಒಂದು ಲಕ್ಷ ರೂ. ಸಹಾಯಧನ ಮತ್ತು ನೇರ ಸಾಲ.
  • ಉದ್ಯಮಶೀಲತಾ ಯೋಜನೆಯಡಿ ಗರಿಷ್ಠ ತಲಾ ಐದು ಲಕ್ಷ ರೂ. ಸಹಾಯಧನ ಹಾಗೂ ಬ್ಯಾಂಕ್ ಸಾಲ ಯೋಜನೆ ಬದಲಾಯಿಸಿ ನಿಗಮದಿಂದಲೇ ತಲಾ 1.50 ಲಕ್ಷ ರೂ. ಸಹಾಯಧನ ಮತ್ತು ನೇರ ಸಾಲ

ಜಿಲ್ಲಾಧಿಕಾರಿ ಹೊಣೆ: ನಿಗದಿತ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಲಾಗಿದೆ. ಅನುದಾನ ಬಿಡುಗಡೆ ಮಾಡುವ ಪೂರ್ವದಲ್ಲಿ ಫಲಾನುಭವಿಗಳ ಅರ್ಹತೆ ಖಾತರಿಪಡಿಸಿಕೊಳ್ಳುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಯದಾಗಿದೆ. ಇದಕ್ಕೆ 15 ದಿನಗಳ ಗಡುವು ವಿಧಿಸಲಾಗಿದೆ ಎಂದು ಆದೇಶ ತಿಳಿಸಿದೆ.