ನ್ಯೂಸ್

ಇತರರಿಗೆ ಸಾಲ ಕೊಡಿಸಿ ಕೈಸುಟ್ಟುಕೊಳ್ಳಬೇಡಿ: ಮಹಿಳೆಯರಿಗೆ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಎಚ್ಚರಿಕೆ

Ramanagara

ರಾಮನಗರ :  ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿಗಳಾಗಬೇಕಿದೆ ಎಂದು ರಾಮನಗರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಯೋಜನೆಯಲ್ಲಿ ಏರ್ಪಡಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ನಮ್ಮ ಸಂಸ್ಥೆಯ ಸಂಘಗಳ ಮೂಲಕ ತೆಗೆದುಕೊಂಡ ಹಣವನ್ನು ದ್ವಿಗುಣಗೊಳ್ಳುವಂತಹ ವೃತ್ತಿಗಳಲ್ಲಿ ಬಳಸಿಕೊಂಡಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿಹೊಂದಲು ಸಾಧ್ಯ. ಸಾಲದ ರೂಪದಲ್ಲಿ ಪಡೆದ ಹಣವನ್ನು ಬೇರೆ ಯಾವುದೋ ಕಾರ್ಯಕ್ಕೆ ಬಳಸಿದರೆ ಕಷ್ಟದಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಬೇರೆಯವರಿಗೆ ಸಾಲ ತೆಗೆದುಕೊಟ್ಟು ಕೈಸುಟ್ಟುಕೊಳ್ಳುವಂತಹ ದುಸ್ಸಾಹಸಕ್ಕೆ ಕೈಹಾಕದಿರಿ ಎಂದು ಎಚ್ಚರಿಸಿದರು.

ಸಂಪನ್ಮೂಲ ವ್ಯಕ್ತಿ ಪುಟ್ಟಸ್ವಾಮಿಗೌಡ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದ ಸಾವಿರಾರು ಉದಾಹರಣೆಗಳಿವೆ. ಆದರೂ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ನಿರಂತರವಾಗಿ ಸಾಗುತ್ತಿದೆ. ಆದ್ದರಿಂದ ಮಹಿಳೆಯರು ಮೊದಲು ಸಂಘಟಿತರಾಗುವ ಮೂಲಕ ಹೆಣ್ಣು ಭ್ರ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹದಂತಹ ಪಿಡುಗುಗಳ ವಿರುದ್ಧ ಹೋರಾಟಬೇಕು. ಸಂವಿಧಾನದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಇತರ ಮಹಿಳೆಯರಿಗೆ ತಿಳಿಸುವ ಮೂಲಕ ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು.

ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಬಲೀಕರಣ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೊರತಾಗಿದ್ದು, ಭಾರತೀಯ ಸಂಸ್ಕೃತಿಯ ಚೌಕಟ್ಟಿನ ಒಳಗಿದ್ದುಕೊಂಡೇ ಬಹು ಎತ್ತರಕ್ಕೆ ಬೆಳೆಯುವ ಅವಕಾಶಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಕೇವಲ ಪಾಶ್ಚಿಮಾತ್ಯ ಭಾಷೆ, ಆಹಾರ, ಆಚಾರ - ವಿಚಾರ, ಉಡುಗೆ ತೊಡುಗೆಗಳಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ ಎಂದು ಪುಟ್ಟಸ್ವಾಮಿಗೌಡ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು. ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಮ್ಮ, ಸದಸ್ಯರಾದ ಲಕ್ಷ್ಮಮ್ಮ, ಗೀತಾಮಣಿ, ಶೃತಿ, ಸರಸಮ್ಮ, ಸುನಂದಾ, ಗೀತಾ, ಶಿವರಾಜಮ್ಮ ಮೇಲ್ವಿಚಾರಕಿ ದಿವ್ಯ ಮತ್ತಿತರರು ಇದ್ದರು.