- ಮಂಡ್ಯ ಹಳ್ಳಿ ಸೊಗಡಿನ ಸಿನಿಮಾ ಲೋ ನವೀನ
- ಗಾಯಕ ನವೀನ್ ಸಜ್ಜು ನಟನೆಯಲ್ಲಿ ನವನವೀನ ಪ್ರದರ್ಶನ
- ದ್ವಿತೀಯಾರ್ಧದ ಕಥಗೆ ಇನ್ನೊಂದಿಷ್ಟು ಟ್ವಿಸ್ಟ್ ಬೇಕಿತ್ತು
ತಾರಾಗಣ: ನವೀನ್ ಸಜ್ಜು, ವರ್ಷ ಗಿರಿಧರ್, ರೇಷ್ಮಾ ವಿ.ಗೌಡ, ಅಪೂರ್ವಶ್ರೀ, ಪ್ರಕಾಶ್ ತೂಮಿನಾಡು ಮತ್ತಿತರರು
ಕನ್ನಡ ಚಿತ್ರರಂಗದಲ್ಲಿ ಗಾಯಕರಾಗಿ ಗುರುತಿಸಿಕೊಂಡಿದ್ದ ನವೀನ್ ಸಜ್ಜು ‘ಲೋ ನವೀನ’ ಮೂಲಕ ಬಣ್ಣ ಹಚ್ಚಿ ನಾಯಕನಟನಾಗಿದ್ದಾರೆ. ಮೊದಲ ಪ್ರಯತ್ನದಲ್ಲಿ ನವೀನ್ ಮಿಂಚಿದರೂ, ಕಥೆ ಅವರಿಗೆ ಸಾಥ್ ನೀಡಿಲ್ಲ. ಸಿನಿಮಾದ ಹಳ್ಳಿ ಸೊಗಡಿನ ವಾತಾವರಣ, ಹಾಸ್ಯ ಮಿಶ್ರಿತ ಸಂಭಾಷಣೆ ಇಷ್ಟವಾಗುತ್ತದೆ.
ಮಂಡ್ಯ ಸೀಮೆಯ ಹುಡುಗ ನವೀನ. ಊರಿನಲ್ಲಿ ಗೆಳೆಯರ ಜತೆ ಹರಟೆ ಹೊಡೆಯುತ್ತಾ, ಕಾಲ ಕಳೆಯುವ ಈತನನ್ನು ಕಂಡರೆ ಮನೆಯವರಿಗೆ ಅಷ್ಟಕ್ಕಷ್ಟೇ. ಅವನ ಮಾವನಿಗೂ ಸಿಟ್ಟು. ಅಂತಹ ಸಿಟ್ಟಿನ ಮಾವನ ಮಗಳು ಆಶಾಳನ್ನೇ (ವರ್ಷ) ಅತ ಪ್ರೀತಿಸುತ್ತಿರುತ್ತಾನೆ. ಅವಳಿಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಲು ಸಿದ್ಧತೆ ನಡೆಸುತ್ತಿರುವಾಗಲೇ, ಆಕೆ ನವೀನನ ಜತೆ ಓಡಿಹೋಗಲು ಪ್ಲ್ಯಾನ್ ಮಾಡುತ್ತಾಳೆ. ರಾತ್ರೋರಾತ್ರಿ ಇಬ್ಬರು ಮನೆ ಬಿಟ್ಟು ಹೋಗುತ್ತಿರುವಾಗ ಗೆಳೆಯರು ಮಾಡಿದ ಅವಾಂತರದಿಂದ ಸಿಕ್ಕಿ ಬೀಳುತ್ತಾರೆ. ಇನ್ನೇನು ಇಬ್ಬರಿಗೂ ತಕ್ಕ ಶಾಸ್ತಿ ಮಾಡಬೇಕು ಎನ್ನುವಷ್ಟರಲ್ಲಿ ಆಶಾ ಉಲ್ಟಾ ಹೊಡೆಯುತ್ತಾಳೆ. ನಂಬಿ ಬಂದ ನವೀನನಿಗೆ ನಂಬಿಕೆ ದ್ರೋಹ ಮಾಡುತ್ತಾಳೆ. ಅದೇ ನೋವಿನಲ್ಲಿ ಆತ ಊರು ಬಿಟ್ಟು ಬೆಂಗಳೂರು ಸೇರಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಮುಂದೆ ಅದೇ ಕಂಪನಿಗೆ ಕೆಲಸಕ್ಕೆಂದು ಆಶಾ ಬರುತ್ತಾಳೆ. ನಂಬಿಸಿ, ಪ್ರೀತಿಸಿ ಕೊನೆಗೆ ವಂಚಿಸಿದ ಆಶಾಳನ್ನು ನೋಡಿ ನವೀನ ಏನು ಮಾಡುತ್ತಾನೆ? ಎಲ್ಲವನ್ನೂ ಮರೆತು ಇಬ್ಬರೂ ಒಂದಾಗುತ್ತಾರಾ? ಅಥವಾ ಅದೇ ಸಿಟ್ಟಿನಲ್ಲಿ ಮುಂದುವರಿಯುತ್ತಾರಾ? ಮುಂದೇನು? ತಿಳಿಯಲು ‘ಲೋ ನವೀನ’ ನೋಡಿ. ಹಳ್ಳಿ ಸೊಗಡಿನ ಜತೆಗೆ ಕಲಾತ್ಮಕ ದೃಶ್ಯಗಳ ಮೂಲಕ ಧನುರ್ಧಾರಿ ಪವನ್ ‘ಲೋ ನವೀನ’ ನಿರೂಪಿಸಿದ್ದಾರೆ. ಮೊದಲರ್ಧದಲ್ಲಿ ನಗುವಿನ ಕಚಗುಳಿ ಇದೆ. ಆದರೆ, ಕಥೆ ಸಾಗಿದಂತೆ ಹಿಡಿತ ತಪ್ಪಿದ್ದು, ದ್ವಿತೀಯಾರ್ಧದ ಕೆಲ ಟ್ವಿಸ್ಟ್‌ಗಳು ಕೃತಕ ಅನ್ನಿಸಿಬಿಡುತ್ತವೆ. ಗಾಯಕ ನವೀನ್ ಸಜ್ಜು ನಾಯಕನಾಗಿ ‘ನವನವೀನ’. ಗ್ರಾಮೀಣ ಭಾಗದಿಂದ ಬಂದ ಅವರು, ಹಳ್ಳಿ ಸೊಗಡಿನ ಪಾತ್ರಕ್ಕೆ ಒಪ್ಪಿದ್ದಾರೆ. ಚಿತ್ರದಲ್ಲಿ ಅವರು ಹಾಡಿರುವ ಎಲ್ಲ ಹಾಡುಗಳು ಸೊಗಸಾಗಿ ಮೂಡಿಬಂದಿವೆ. ವರ್ಷ ಗಿರಿಧರ್ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.