ನ್ಯೂಸ್

ಯುಗಾದಿ ಹಬ್ಬದಂದು ಜೀವಂತ ಸಮಾಧಿಯಾಗಲು ಯತ್ನ: ಈತ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ! Bury Himself Alive

Bury Himself Alive : ವ್ಯಕ್ತಿಯೊಬ್ಬ ತನ್ನನ್ನು ತಾನು ಜೀವಂತ ಸಮಾಧಿಯಾಗಲು ಯತ್ನಿಸಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ತಲ್ಲೂರು ಮಂಡಲದ ವಿಠಲಾಪುರದಲ್ಲಿ ನಡೆದಿದೆ. ಈ ಘಟನೆ ಇದೀಗ ಸ್ಥಳೀಯವಾಗಿ ಚರ್ಚೆಯ ವಿಷಯವೂ ಆಗಿದೆ.

ವಿಠಲಾಪುರಂ ಗ್ರಾಮದ ಮಾಜಿ ಸದಸ್ಯ ಕೈಪು ಅಂಜಿರೆಡ್ಡಿ ಅವರ ಪುತ್ರ ಕೈಪು ಕೋಟಿರೆಡ್ಡಿ 12 ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿರುವ ತನ್ನ ಹೊಲದಲ್ಲಿ ಭೂದೇವಿ ದೇವಸ್ಥಾನವನ್ನು ನಿರ್ಮಿಸಿದ್ದರು. ಅದೇ ದೇವಾಲಯದ ಮುಂದೆ ಅವರು ಒಂದು ದೊಡ್ಡ ಗುಂಡಿಯನ್ನು ತೋಡಿದ್ದು, ಒಂದು ವಾರದಿಂದ ಆ ಗುಂಡಿಗೆ ಇಳಿದು, ಮೇಲೆ ಕಾಗದದ ಹಾಳೆಯನ್ನು ಇಟ್ಟು ಧ್ಯಾನ ಮಾಡುತ್ತಿದ್ದರು.

ಯುಗಾದಿಯ ದಿನದಂದು ಜೀವಂತ ಸಮಾಧಿಯಾಗಲು ನಿರ್ಧರಿಸಿದ್ದರು. ಕೋಟಿರೆಡ್ಡಿ ತಮ್ಮ ಮಗನೊಂದಿಗೆ ದೇವಸ್ಥಾನವನ್ನು ತಲುಪಿ ವಿಶೇಷ ಪೂಜೆಗಳನ್ನು ಮಾಡಿ, ನಂತರ ಸಮಾಧಿಯಂತೆ ಜೋಡಿಸಲಾದ ಗುಂಡಿಗೆ ಇಳಿದು ಧ್ಯಾನದಲ್ಲಿ ತೊಡಗಿದರು. ಅವರ ಮಗ ಗುಂಡಿಯ ಮೇಲೆ ಒಂದು ದೊಡ್ಡ ಕಾಗದದ ಹಾಳೆಯನ್ನು ಇಟ್ಟು, ಅದರ ಮೇಲೆ ಮಣ್ಣನ್ನು ಸುರಿದನು.

ಈ ವಿಷಯ ತಿಳಿದ ಕೂಡಲೇ ಕೋಟಿರೆಡ್ಡಿಯ ತಂದೆ ಅಂಜಿ ರೆಡ್ಡಿ ಮತ್ತು ಇತರರು ಸ್ಥಳಕ್ಕೆ ತಲುಪಿದರು. ತಕ್ಷಣ ಗುಂಡಿಯಿಂದ ಹೊರಗೆ ಬರುವಂತೆ ಕೋಟಿರೆಡ್ಡಿಯನ್ನು ಕೇಳಿಕೊಂಡರು. ಆದರೆ, ಆತ ಹೊರಬರಲು ನಿರಾಕರಿಸಿ, ಯಾರೂ ನನ್ನ ಧ್ಯಾನಕ್ಕೆ ತೊಂದರೆ ನೀಡಬಾರದು ಎಂದು ಹೇಳಿದರು. ಇತ್ತ ಮಾಹಿತಿ ಪಡೆದ ತಲ್ಲೂರು ಪೊಲೀಸರು ಸ್ಥಳಕ್ಕೆ ತಲುಪಿ, ಸ್ಥಳೀಯರ ಸಹಾಯದಿಂದ ಕೋಟಿರೆಡ್ಡಿಯನ್ನು ಗುಂಡಿಯಿಂದ ಹೊರತೆಗೆದಿದ್ದಾರೆ.

ಪೊಲೀಸರು ಹೋದ ನಂತರ, ಕೋಟಿರೆಡ್ಡಿ ಮತ್ತೆ ಅದೇ ಗುಂಡಿಗೆ ಹೋಗಿ ಧ್ಯಾನ ಮಾಡಿದ. ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಬಂದು ಹೊರಗೆ ಬರುವಂತೆ ಕೇಳಿದ ನಂತರ ಕೋಟಿರೆಡ್ಡಿ ಮನೆಗೆ ಮರಳಿದರು. ವಿಶ್ವದ ಶಾಂತಿಗಾಗಿ ತನ್ನನ್ನು ತಾನು ಜೀವಂತ ಸಮಾಧಿ ಮಾಡಿಕೊಳ್ಳಲು ಹೋಗಿದ್ದೆ ಎಂದು ಕೋಟಿರೆಡ್ಡಿ ಹೇಳಿದ್ದಾರೆ.

ನನ್ನ ತಾಯಿ ಏನು ಹೇಳುತ್ತಾರೋ ಅದನ್ನು ನಾನು ಮಾಡುತ್ತೇನೆ. ನನ್ನ ತಾಯಿ ಹೇಳಿದಂತೆ ನನ್ನ ಸ್ವಂತ ಹಣದಿಂದ ಎರಡು ದೇವಾಲಯಗಳನ್ನು ನಿರ್ಮಿಸಿದೆ. ಇಡೀ ಜಗತ್ತು ಸಂತೋಷ ಮತ್ತು ಸಮೃದ್ಧವಾಗಿರಬೇಕು. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲ ಜನರು ಒಟ್ಟಿಗೆ ಬದುಕಬೇಕು ಎಂದು ನಾನು ನನ್ನ ತಾಯಿಯ ಮುಂದೆ ದೀಕ್ಷೆ ತೆಗೆದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಪೊಲೀಸರು ಬಂದು ನನ್ನ ದೀಕ್ಷೆಯನ್ನು ಮುರಿದರು ಎಂದು ಕೋಟಿರೆಡ್ಡಿ ಹೇಳಿದ್ದಾರೆ. (ಏಜೆನ್ಸೀಸ್​)