ಕೋಲಾರ: ಬಸವಣ್ಣನವರ ಸಪ್ತ ಸೂತ್ರಗಳನ್ನು ಪಾಲಿಸಿದರೆ ಬದುಕು ಸ್ವರ್ಗವಾಗುತ್ತದೆ ಎಂದು ಶ್ರೀಮದ್ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸ್ವರ್ಣಭೂಮಿ ಫೌಂಡೇಷನ್, ರೋಟರಿ ಕ್ಲಬ್, ಸುಪ್ರೀಂ ಸೇವಾ ಸಂಸ್ಥೆ ಹಾಗೂ ವಿಜಯ ಉನ್ನತಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ವಚನ ವೈಭವ, ವಚನ ಗಾಯನ ಹಾಗೂ ಸಾಂಸತಿ ಕಾರ್ಯಕ್ರಮದಲ್ಲಿ ಮತನಾಡಿದರು.
ವಚನಗಳು ಸಮಾಜದಲ್ಲಿ ದ್ವೇಷ, ಅಸೂಯೆ, ಜಾತಿಯತೆಯ ಕತ್ತಲನ್ನು ತೊಡೆದು ಹಾಕಿ ಬೆಳಕು ತೋರುವ ಮುತ್ತು ರತ್ನಗಳಿಗಿಂತಲೂ ಅಮೂಲ್ಯ ಎಂದು ಅಭಿಪ್ರಾಯಪಟ್ಟರು.
12ನೇ ಶತಮಾನದಲ್ಲಿ ಬಸವಣ್ಣನವರ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸಾವಿರಾರು ವಚನಗಳನ್ನು ರಚಿಸಿದಂತ ಮೇಧಾವಿಗಳಿದ್ದರು. ವಚನಗಳು ವಾಚನ ಮಾಡುವುದು ಸುಲಭವಾದರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ವ್ಯರ್ಥದ ಜೀವನ ಎನಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವಕರನ್ನು, ವಿಕಲಚೇತನರನ್ನು, ಪ್ರತಿಭಾವಂತರನ್ನು, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇನ್ನಷ್ಟು ಪ್ರೇರಣೆ ನೀಡುವುದು ಉತ್ತಮ ಕೆಲಸವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಎಂ.ಮುನಿರಾಜು ಮಾತನಾಡಿ, ಮನುಷ್ಯನು ಮನುಷ್ಯತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿಮಾರ್ಣ ಸಾಧ್ಯ ಎಂಬುವುದನ್ನು ವಚನಕಾರರು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಪತ್ರಕರ್ತ ಕೆ.ಎಸ್.ಗಣೇಶ್, ಚಿತ್ರದುರ್ಗದ ಲೇಖಕಿ ಗೀತಾ ಭರಮಸಾಗರ, ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ನಾಗನಂದ ಕೆಂಪರಾಜ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮಾರ್,
ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಂ.ಚಂದ್ರಶೇಖರ್, ಸಾಹಿತಿ ಬಿ.ಆರ್.ರವೀಂದ್ರ, ಸಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಚ್.ರಾಮಚಂದ್ರಪ್ಪ, ಬೆಂಗಳೂರು ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಗುಡ್ಡೆ, ರೋಟರಿ ಕ್ಲಬ್ ಕಾರ್ಯದರ್ಶಿ ಎ.ಎಂ. ಪ್ರಭಾಕರ್, ಕಾನೂನು ನೆರವು ಅಭಿರಕ್ಷಕ ಎಸ್.ಸತೀಶ್, ಸುರಕ್ಷಿತ್ ಗಾನ ಕಲಾ ವೇದಿಕೆ ಕಾರ್ಯದರ್ಶಿ ಸುಜಾತಾ, ಮುಳಬಾಗಿಲು ಸಾರ್ಕ್ ಸಂಸ್ಥೆ ಕಾರ್ಯದರ್ಶಿ ಪಿ.ಮೇಘರಾಜು, ಆನಂದ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಎಂ.ಡಿ.ಆನಂದರೆಡ್ಡಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಇದ್ದರು.