ನ್ಯೂಸ್

ನಾಳೆ ಎಂಬ ಭರವಸೆಯ ಬದುಕು

ಸತ್ತೆನದೆಂದೆನಬೇಡ; ಸೋತೆನೆಂದೆನಬೇಡ |

ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||

ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |

ಮತ್ತೆ ತೋರ್ಪದು ನಾಳೆ - ಮಂಕುತಿಮ್ಮ ||

‘ಸತ್ತೆ ಎನ್ನಬೇಡ, ಸೋತೆ ಎಂದೂ ಹೇಳಬೇಡ. ನನ್ನಲ್ಲಿ ಸತ್ತ್ವದ ಒರತೆ ಬತ್ತಿತೆಂದೂ ಹೇಳದಿರು. ಸಾವು ಎನ್ನುವುದು ಒಂದು ತೆರೆಯ ಏರ-ಇಳಿತ. ಮತ್ತೆ ನಾಳೆಯು ಬಂದೇ ಬರುತ್ತದೆ’ ಎನ್ನುತ್ತದೆ ಈ ಕಗ್ಗ.

ಪುಣ್ಯವಿಶೇಷದಿಂದಲೇ ಮನುಷ್ಯಜೀವಿತ ಲಭ್ಯವಾಗುತ್ತದೆ. ಇದು ಪರಿಪೂರ್ಣತೆಯನ್ನು ಪಡೆಯಲೋಸುಗ ಸಾಗುವ ಆತ್ಮಯಾತ್ರೆಯ ಒಂದು ಹಂತ. ಈ ಯಾತ್ರೆ ಸುಗಮವಾಗಿ ಸಾಗಲೆಂಬ ಉದ್ದೇಶದಿಂದಲೇ ಪ್ರಕೃತಿಯು ಆತ್ಮನಿಗೆ ದೇಹವೆಂಬ ರಥ, ಇಂದ್ರಿಯಗಳೆಂಬ ಕುದುರೆಗಳು, ಮನಸ್ಸು ಎಂಬ ಲಗಾಮು, ಬುದ್ಧಿಯೆಂಬ ಸಾರಥಿಯನ್ನು ಒದಗಿಸಿದೆ. ಅಂದರೆ ವಿವೇಕವೆಂಬ ಸಾರಥಿಯ ಮೂಲಕ ಜೀವನವನ್ನು ಸಾರ್ಥಕತೆಯತ್ತ ಮುನ್ನಡೆಸುವ ಕೌಶಲವು ಮಾನವನಿಗೆ ಪ್ರಾಪ್ತವಾಗಿದೆ. ಉಳಿದ ಜೀವಜಂತುಗಳಿಗೆ ಈ ಅವಕಾಶವಿಲ್ಲ. ಹೀಗಿದ್ದರೂ ಮನುಷ್ಯ ತೃಪ್ತನಲ್ಲ, ಸದಾ ಸಂತಪ್ತ. ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ ಮೂರು ಅವಸ್ಥೆಗಳನ್ನು ದಾಟಿದರೂ ಆತನಿಗೆ ಬದುಕು ಅರ್ಥವಾಗುವುದಿಲ್ಲ. ಕೈಸೋತ ಹೊತ್ತು ಜೀವನೋತ್ಸಾಹವನ್ನೇ ಕಳೆದುಕೊಳ್ಳುತ್ತಾನೆ.

ಬದುಕಿನಲ್ಲಿ ಅನನುಕೂಲ ಪರಿಸ್ಥಿತಿ ಎದುರಾದಾಗಲೆಲ್ಲ ವ್ಯಕ್ತಿ ಸಂಯಮವನ್ನು ಕಳೆದುಕೊಳ್ಳುವುದು, ಭಾವೋದ್ವೇಗದಿಂದ ಪ್ರತಿಕ್ರಿಯಿಸುವುದು ಸಾಮಾನ್ಯ. ಶ್ರಮಪಟ್ಟು ಮಾಡಿದ ಕೆಲಸ ವ್ಯರ್ಥವಾದರೆ, ಬಯಸಿದ್ದು ಸಿಗದಿದ್ದರೆ, ಆಪ್ತರಿಂದ ನೋವು, ವಂಚನೆಗಳಾದರೆ ಹತಾಶನಾಗುವುದುಂಟು. ಜಗದ ಬಗೆಗಿನ ಬಯಕೆಗಳು ದಿನ ಕಳೆದಂತೆ ವ್ಯಕ್ತಿಯಲ್ಲಿ ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಜತೆಗಿದ್ದವರನ್ನು, ಪರಿಚಿತರನ್ನು ಸಾವು ಅನೂಹ್ಯ ರೀತಿಯಲ್ಲಿ ಕಸಿದುಕೊಳ್ಳುವುದನ್ನು ಕಂಡು ಭಯಗೊಳ್ಳುತ್ತಾನೆ. ಕರೆಯದೆ ಬರುವ ಸಾವು ಮಾಡುವ ಅನಾಹುತವನ್ನು ಕಂಡು ಕಳವಳಪಡುತ್ತಾನೆ. ಆಗ ಮನಸ್ಸು ಬಲವಂತವಾಗಿ ವಿರಕ್ತಿಯನ್ನು ಆವಾಹಿಸಿಕೊಳ್ಳುತ್ತದೆ. ಒಳಗೊಳಗೆ ಆಸೆ ಭುಸುಗುಡುತ್ತಿದ್ದರೂ ಅಧೈರ್ಯ, ನಿರಾಸೆಗಳಿಂದ ಮನಸ್ಸು ಪ್ರಕ್ಷುಬ್ಧವಾಗುತ್ತದೆ.

ವೈಪರೀತ್ಯಗಳನ್ನು ಎದುರಿಸುವಾಗ ಪ್ರತಿಯೊಬ್ಬರೂ ಆತಂಕಪಡುವುದುಂಟು. ಆದರೆ ಆ ಆತಂಕದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ವ್ಯಕ್ತಿಯ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತವೆ. ಬದುಕಿನಲ್ಲಿ ಸಂಭವಿಸುವ ಆಕಸ್ಮಿಕಗಳಿಗೆ ಕಾರಣವನ್ನು ಹುಡುಕಲು ಸಾಮಾನ್ಯರಿಗೆ ಸಾಧ್ಯವಿಲ್ಲದ್ದರಿಂದ ಮತ್ತೆಮತ್ತೆ ಸಾಂಸಾರಿಕ ಕ್ಲೇಶಗಳಲ್ಲಿ ತೊಳಲಾಡುತ್ತಾರೆ. ಆಧ್ಯಾತ್ಮಿಕವಾಗಿ ನೋಡಿದರೆ ಈ ಜಗತ್ತು ಎನ್ನುವುದು ಭ್ರಮೆ. ಇಲ್ಲಿ ಮಿಥ್ಯೆಗಳೇ ತುಂಬಿವೆ. ಅದರಲ್ಲಿ ಬದುಕು ಎನ್ನುವುದು ನೀರ ಮೇಲಿನ ಗುಳ್ಳೆ. ಮೃತ್ಯುವು ಸಾಗರದ ಅಲೆಯಂತೆ ಬರುತ್ತಿರುತ್ತದೆ. ದೇಹವನ್ನು ತ್ಯಜಿಸಿದ ಆತ್ಮವು ತನ್ನ ಕರ್ವನುಸಾರಿಯಾಗಿ ಮತ್ತೆ ಮತ್ತೆ ಹುಟ್ಟಿ ಬರುತ್ತದೆ, ಬಂಧಮುಕ್ತವಾದಂದು ಸಾಯುಜ್ಯವನ್ನು ಹೊಂದುತ್ತದೆ. ಆದುದರಿಂದ ಸಾವು ಎಂದರೆ ತೆರೆಯ ಏಳು-ಬೀಳು. ಹಲವು ಅಲೆಗಳಿದ್ದರೂ ಅವುಗಳಿಗೆ ಕಾರಣವಾದ ಸಾಗರ ಒಂದೇ. ಸಾಗರದಲ್ಲಿ ಹುಟ್ಟಿದ ಅಲೆ ಮತ್ತೆ ಸಾಗರವನ್ನೇ ಸೇರುತ್ತದೆ. ಅಂತೆಯೇ ಹುಟ್ಟಿದ ಜೀವನೂ ಒಂದಲ್ಲ ಒಂದು ದಿನ ಸಾವಿನ ಬಾಗಿಲಿನಾಚೆ ಮತ್ತೊಂದು ಆರಂಭವನ್ನು ಕಾಣುತ್ತಾನೆ. ಬ್ರಹ್ಮದೃಷ್ಟಿಯಿಂದ ಇವೆಲ್ಲ ಮಿಥ್ಯವಾದರೂ ಈ ಅರಿವಿನಿಂದ ಜೀವನದೃಷ್ಟಿ ಕುರುಡಾಗಬಾರದು.

ಬಾಳಿನ ಏಳುಬೀಳುಗಳ ಅನುಭವವು ಜೀವಕ್ಕೆ ಸಂಸ್ಕಾರ ನೀಡುತ್ತದೆ. ಕೊರತೆಗಳನ್ನು ತುಂಬಿಕೊಳ್ಳಲು, ನೋವಿನಿಂದ ಮುಕ್ತರಾಗಲು ಯತ್ನಿಸುವುದರಲ್ಲೇ ಜೀವನದ ಸಾರ್ಥಕತೆ ಇದೆ. ಸಂಕಟಗಳಲ್ಲಿ, ಸಾವು-ನೋವುಗಳಲ್ಲಿ ಬಾಳಿನ ಮೌಲ್ಯದ ಅರಿವಾಗಬೇಕು. ಎಂದಾದರೂ ಸಾವು ಬಂದೇ ಬರುವುದೆಂದು ಅಪಾಯ ತಂದುಕೊಳ್ಳುವುದು ಅವಿವೇಕ. ಭಾಗ್ಯವಶಾತ್ ಸಿಕ್ಕಿರುವ ಮನುಷ್ಯಜನ್ಮವನ್ನು ಸುಂದರಗೊಳಿಸಲು ಯತ್ನಿಸಬೇಕು. ಬದುಕು ಪ್ರತಿದಿನವೂ ಹೊಸ ಅರಿವಿನೊಂದಿಗೆ ಹೊಸದಾಗುತ್ತಿರುವುದನ್ನು ಕಾಣುತ್ತ ನಾಳೆಗಳು ನಮ್ಮವು ಎಂಬ ಭರವಸೆಯಿಂದ ಜೀವಿಸುವುದೇ ನಿಜವಾದ ಜೀವನ. ಕೊರಗುವುದು, ನರಳುವುದು ಮೃತ್ಯುಸಮಾನ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: kaviadoor@gmail.com)