ಹೊಸನಗರ: ಸಾಹಿತ್ಯದ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನ ಒಗ್ಗೂಡಲು ಇದೊಂದು ಸೇತುವೆಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ ಹೇಳಿದರು.
ನಾಗರಕೊಡಿಗೆಯಲ್ಲಿ ಆಯೋಜಿಸಿದ್ದ ಮನೆ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಮನಸ್ಸು ಮುದಗೊಳ್ಳಬೇಕಾದರೆ ಪ್ರವಾಸ ಮತ್ತು ಅಧ್ಯಯನ, ಚರ್ಚೆ ಅವಶ್ಯಕತೆ ಇದೆ ಎಂದರು.
ಇಂದು ಸಾಹಿತ್ಯ-ಸಾಹಿತಿಗಳ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮೂಡಿದೆ. ಇದರಿಂದ ಕಥೆ, ಕಾದಂಬರಿಗಳ ಮೂಲಕ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ನಾವು ಎಡವುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ತಲೆಮಾರಿನವರಿಗೆ ಈ ಮೂಲಕ ನಾವು ಬಹುದೊಡ್ಡ ದ್ರೋಹ ಎಸಗಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವು ಮುಂದಿನ ಪೀಳಿಗೆಗೆ ಈಗಿನ ಸಂಸ್ಕೃತಿಯನ್ನೇ ಬಿಟ್ಟು ಹೋದರೆ, ಇನ್ನು 50 ವರ್ಷಗಳೊಳಗೆ ನಮ್ಮ ದೇಶವು ಮತ್ತೆ ಗುಲಾಮಗಿರಿಯತ್ತ ವಾಲುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಪ್ರಸಕ್ತ ಸಂದರ್ಭದಲ್ಲಿ ಸಾಹಿತ್ಯವು ಈ ಎಲ್ಲ ಸಮಸ್ಯೆಗಳಿಗೆ ಔಷಧ ಆಗಬಲ್ಲದು. ಈ ಹಿನ್ನೆಲೆಯಲ್ಲಿ ಮನೆ ಮನೆ ಅಂಗಳದಲ್ಲಿ ಸಾಹಿತ್ಯದಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಹೊಸನಗರ ಕಸಾಪ ನೂತನ ಕಾರ್ಯದರ್ಶಿ ಕುಬೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ರಮಾಕಾಂತಿ ದಿವಾಕರ್ ಇತರರಿದ್ದರು. ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಡಿ.ಎಸ್.ರಾಘವೇಂದ್ರ ಜೋಯಿಸರನ್ನು ಸನ್ಮಾನಿಸಲಾಯಿತು.