ನ್ಯೂಸ್

'ಮದ್ಯ ಕುಡಿಯಿರಿ, ಇಂಗ್ಲಿಷ್‌ ಕಲಿಯಿರಿ' ಆಫರ್​ ಕೊಟ್ಟ ಸಾರಾಯಿ ಅಂಗಡಿ ಮಾಲೀಕನಿಗೆ ಬಿತ್ತು ದಂಡ

ಮಧ್ಯಪ್ರದೇಶ: ಮದ್ಯದ ಅಂಗಡಿಯೊಂದು ಗ್ರಾಹಕರನ್ನು ಆಕರ್ಷಿಸಲು ಜಾಹೀರಾತನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮದ್ಯದಂಗಡಿ ಮಾಲೀಕನಿಗೆ ಸಂಕಷ್ಟವನ್ನುಂಟುಮಾಡಿದ್ದು, ಭಾರಿ ದಂಡವನ್ನು ಕಟ್ಟ ಬೇಕಾಗಿದೆ. ಈ ಘಟನೆ ಮಂದ್ಯಪ್ರದೇಶದಲ್ಲಿ ನಡದಿದೆ.

ಕುಡಿದ ಮತ್ತಿನಲ್ಲಿ ಜನರು ತೊದಲು ಮಾತನಾಡುವುದನ್ನೇ ಇಂಗ್ಲಿಷ್‍ನಲ್ಲಿ ಮಾತನಾಡುವ ಶೈಲಿಯಂದು ಹೇಳಿ ಜಾಹೀರಾತನ್ನು ಹಾಕಿದ್ದಕ್ಕಾಗಿ ಮಧ್ಯಪ್ರದೇಶದ ಮದ್ಯದಂಗಡಿ ಮಾಲೀಕರಿಗೆ 10,000 ರೂ.ಗಳ ದಂಡ ವಿಧಿಸಲಾಗಿದೆ.

ಬುರ್ಹಾನ್ಪುರ ಜಿಲ್ಲೆಯ ನಚನ್‍ಖೇಡಾದಲ್ಲಿರುವ ಮದ್ಯದಂಗಡಿಯ ಬಳಿ ಮಾಲೀಕ ” ಇಂಗ್ಲಿಷ್ ಬೋಲ್ನಾ ಸೀಖೇʼʼ (ಇಂಗ್ಲಿಷ್ ಮಾತನಾಡಲು ಕಲಿಯಿರಿ) ಎಂಬ ಸಂದೇಶವನ್ನು ಬರೆದಿರುವ ಬ್ಯಾನರ್ ಹಾಕಿದ್ದ. ಈ ಸಂದೇಶದ ಕೆಳಗೆ ಬಾಣವೊಂದನ್ನು ಬಿಡಿಸಿದ್ದು, ಅದು ಮದ್ಯದಂಗಡಿಯನ್ನು ತೋರಿಸುತ್ತಿತ್ತು.

ಈ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಇದು ಯುವಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬುರ್ಹಾಂಪುರ ಜಿಲ್ಲಾಧಿಕಾರಿ ಶನಿವಾರ ಮದ್ಯದಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕನಿಗೆ ನೋಟಿಸ್ ನೀಡಿದೆ.

ಅಧಿಕಾರಿಗಳ ನೋಟಿಸ್​​ಗೆ ಉತ್ತರಿಸಿದ ಅಂಗಡಿ ಮಾಲೀಕ, ತನ್ನ ಅಂಗಡಿಯಿಂದ 40-5೦ ಅಡಿ ದೂರದಲ್ಲಿರುವ ಇನ್ನೊಬ್ಬ ವ್ಯಕ್ತಿಯ ಖಾಸಗಿ ಜಮೀನಿನಲ್ಲಿ ಬ್ಯಾನರ್ ಹಾಕಲಾಗಿದೆ.  ಇದು ಬೇರೆ ಯಾರೋ ಮಾಡಿರುವ ಪಿತೂರಿ  ಎಂದು ಸಮರ್ಥನೆ ನೀಡಿದ್ದಾನೆ.  ಮದ್ಯದ ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 10,000 ರೂ.ಗಳ ದಂಡ ವಿಧಿಸಿದರು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.