ನ್ಯೂಸ್

ಓಪನ್​ ಆಗಲಿವೆ ಎಂಎಸ್​ಐಎಲ್​ ಮದ್ಯದ ಮಳಿಗೆಗಳು ಮಾರಾಟಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ಯಾವುದೇ ರಾಜ್ಯಕ್ಕಾದರೂ ಅಬಕಾರಿ ಆದಾಯ ಪ್ರಮುಖ ಸಂಪನ್ಮೂಲ. ಜತೆಗೆ, ಅತಿ ಹೆಚ್ಚು ತೆರಿಗೆ ವಿಧಿಸಿ ಬೊಕ್ಕಸ ತುಂಬಿಸಿಕೊಳ್ಳುವ ಮಾರ್ಗವೂ ಹೌದು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ದೇಶಾದ್ಯಂತ ಮದ್ಯ ಮಾರಾಟಕ್ಕೆ ಬ್ರೇಕ್​ ಬಿದ್ದಿದೆ. ಬಾರ್​ ಆ್ಯಂಡ್​ ರೆಸ್ಟೋರಂಟ್​ ಹಾಗೂ ಮದ್ಯ ಮಳಿಗೆಗಳನ್ನು ಮುಚ್ಚಿದ್ದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ಖೋತಾ ಆಗುತ್ತಿದೆ.

ಕೆಲ ವಾರಗಳ ಹಿಂದೆಯೇ ಮದ್ಯ ಮಾರಾಟ ಆರಂಭಿಸುವ ಬಗ್ಗೆ ಸಚಿವರ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಜತೆಗೆ, ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಇದೀಗ ಸಂಪುಟ ಸಭೆಯಲ್ಲಿಯೇ ಈ ಚರ್ಚೆ ನಡೆದಿದೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್ ಐಎಲ್ ಸಂಸ್ಥೆ ಮೂಲಕ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಮಳಿಗೆಗಳನ್ನು ತೆರೆದು ಮದ್ಯವನ್ನು ಪಾರ್ಸೆಲ್​ ಕೊಂಡೊಯ್ಯಲು ಅವಕಾಶ ನೀಡಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಘೋಷಿಸಲಿರುವ ವಿನಾಯ್ತಿಗಳ ಪಟ್ಟಿಯಲ್ಲಿ ಹೊಟೇಲ್​, ಬಾರ್​ ಆ್ಯಂಡ್​ ರೆಸ್ಟೋರಂಟ್​ಗಳಿಗೆ ವಿನಾಯ್ತಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ. ಸದ್ಯಕ್ಕೆ ಖಾಸಗಿ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಬೇಡ ಎನ್ನಲಾಗಿದೆ.

ಎಂಎಸ್​ಐಎಲ್​ ಮಳಿಗೆಗಳಲ್ಲಿ ಸಿದ್ಧತೆ: ಒಂದೊಮ್ಮೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದಲ್ಲಿ ಜನರನ್ನು ನಿಭಾಯಿಸಲು ಎಂಎಸ್​ಐಎಲ್​ ಮಳಿಗೆಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಬ್ಯಾರಿಕೇಡ್​ಗಳನ್ನು ಹಾಕಿ ಜನರಲ್ಲಿ ಸಾಮಾಜಿಕ ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಮಳಿಗೆದಾರರರೊಬ್ಬರು ತಿಳಿಸಿದ್ದಾರೆ.