ಚೆನ್ನೈ: ಲಾಕ್ಡೌನ್ ಅವಧಿಯಲ್ಲಿ ಮುಚ್ಚಿದ್ದ ಮದ್ಯದಂಗಡಿಗಳನ್ನು ಇದೀಗ ಬಹುತೇಕ ರಾಜ್ಯಗಳಲ್ಲಿ ತೆರೆಯಲಾಗಿದೆ. ಎಣ್ಣೆಪ್ರಿಯರು ಇದರಿಂದ ಸಂಪೂರ್ಣ ತೃಪ್ತರಾಗಿದ್ದರೆ, ಹಲವು ಕುಟುಂಬಗಳ ಗೋಳು ಹೇಳತೀರದು.
ಅದೇ ಇನ್ನೊಂದೆಡೆ, ಮದ್ಯ ಖರೀದಿಗೆ ಮುಗಿಬಿದ್ದು, ಸಾಮಾಜಿಕ ಅಂತರ ಕಾಪಾಡದೇ ಕರೊನಾ ವೈರಸ್ ಹರಡುವಲ್ಲಿ ಇವರ ಪಾಲು ದೊಡ್ಡದಿದೆ ಎನ್ನುವ ಭಯ. ಯಾರು ಏನೇ ಗೋಳಾಡಿದರೂ ರಾಜ್ಯ ಸರ್ಕಾರಗಳು ಪುನಃ ಮದ್ಯದಂಗಡಿ ಬಂದ್ ಮಾಡಲು ಸುತರಾಂ ಒಪ್ಪುತ್ತಿಲ್ಲ. ಆದ್ದರಿಂದ ಬೇರೆ ದಾರಿ ಕಾಣದೇ ಮದ್ಯವಿರೋಧಿಗಳು ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ.
ಮದ್ಯದಂಗಡಿ ತೆರೆದಿದ್ದನ್ನು ಪ್ರಶ್ನಿಸಿ ಇದಾಗಲೇ ಸುಪ್ರೀಂಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ ಅಂಗಡಿ ಮುಚ್ಚುವಂತೆ ತಾನು ಆದೇಶ ಹೊರಡಿಸುವುದಿಲ್ಲ ಎಂದು ಕೋರ್ಟ್ ಹೇಳಿಬಿಟ್ಟಿದೆ. ಮನೆ ಬಾಗಿಲಿಗೇ ಮದ್ಯದ ಪೂರೈಕೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಅದು ಹೇಳಿದೆ.
ಅದರ ಬೆನ್ನಲ್ಲೇ ಇದೀಗ ಮದ್ರಾಸ್ ಹೈಕೋರ್ಟ್ ಮದ್ಯದ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದೆ. ಹೈಕೋರ್ಟ್ ಕೂಡ ತಾನು ಅಂಗಡಿ ತೆರೆದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ ಸೋಂಕು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಅನ್ವಯ ಇನ್ನುಮುಂದೆ ತಮಿಳುನಾಡಿನಲ್ಲಿ ಇನ್ನುಮುಂದೆ ಮದ್ಯವನ್ನು ಖರೀದಿಸಿದಾಗ ಬಿಲ್ ಪಡೆಯುವ ವೇಳೆ ಹೆಸರಿನ ಜತೆ ಆಧಾರ್ ಕಡ್ಡಾಯವಾಗಿ ನಮೂದಿಸಬೇಕು. ಅಷ್ಟೇ ಅಲ್ಲದೇ, ವಾರಕ್ಕೆ ಎರಡು ದಿನಗಳು ಮಾತ್ರ ಅಂದರೆ ಮೂರು ದಿನಗಳ ಅಂತರದಲ್ಲಿ ಮಾತ್ರ ಮದ್ಯ ಖರೀದಿ ಮಾಡಬೇಕು ಎಂದಿದೆ.
ಆಧಾರ್ ನಂಬರ್ ನೀಡುವ ಹಿನ್ನೆಲೆಯಲ್ಲಿ, ವಾರಕ್ಕೆ ಎರಡಕ್ಕಿಂತ ಹೆಚ್ಚಿನ ಬಾರಿ ಒಬ್ಬನೇ ವ್ಯಕ್ತಿ ಮದ್ಯ ಖರೀದಿಗೆ ಹೋದರೆ ಸಿಕ್ಕಿಬೀಳುವುದು ಗ್ಯಾರೆಂಟಿ. ಆದ್ದರಿಂದ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರ್ಟ್ ಹೇಳಿದೆ. ಇದರ ಜತೆಗೆ, ನಗದು ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದಿರುವ ಹೈಕೋರ್ಟ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇಲ್ಲದ ಗ್ರಾಹಕರ ಬಳಿ ಮಾತ್ರ ನಗದು ಪಡೆಯಬಹುದಾಗಿದೆ ಎಂದಿದೆ.
ಸಾಮಾಜಿಕ ಅಂತರ ಸೇರಿದಂತೆ ಲಾಕ್ಡೌನ್ ಸಮಯದಲ್ಲಿ ವಿಧಿಸಲಾಗಿರುವ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಮದ್ಯದಂಗಡಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ತೆರೆದಿಡಬೇಕು, ಗುಂಪು ಸೇರಬಾರದು, ಟೋಕನ್ ಸಿಸ್ಟಮ್ ಜಾರಿಗೆ ತರಬೇಕು ಸೇರಿದಂತೆ ಕೆಲವು ನಿಯಮಾವಳಿಗಳನ್ನು ಕೋರ್ಟ್ ರೂಪಿಸಿದೆ.