ಬೆಂಗಳೂರು: ಸಾಮಾನ್ಯವಾಗಿ ನಮ್ಮೆಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಕೇಳಬೇಕಾ? ಕಡಿಮೆ ಎನ್ನುವ ಮಾತೇ ಬೇಡ. ಇಂದಿನ ಯುವಜನತೆ ತಮ್ಮ ಇಷ್ಟದ ಬ್ರ್ಯಾಂಡ್ಗಳನ್ನು ಆಯಾ ರೆಸ್ಟೋರೆಂಟ್, ಪಬ್ಗಳಲ್ಲಿ ಖರೀದಿಸಿ, ಸೇವನೆ ಮಾಡುತ್ತಾರೆ. ಇಂದು ನಾವು ಮನೆಯಲ್ಲೇ ಕುಳಿತು ನಮಗೆ ಬೇಕಾದ ಆಹಾರಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ತಿನ್ನಬಹುದು. ಕೆಲವೇ ನಿಮಿಷಗಳಲ್ಲಿ ನಮ್ಮ ನೆಚ್ಚಿನ ಫುಡ್ ಐಟಂಗಳು ಮನೆಯ ಬಾಗಿಲ ತಲುಪುವುದು ಶರವೇಗದಲ್ಲಿ ನುಗ್ಗುತ್ತಿರುವ ಇಂದಿನ ಡಿಜಿಟಲ್ ಯುಗದ ಸಾಮರ್ಥ್ಯ ಎಂದೇ ಹೇಳಬಹುದು.
ಸಸ್ಯಾಹಾರಿ, ಮಾಂಸಹಾರಿ, ಐಸ್ಕ್ರೀಂ, ಹಣ್ಣು-ತರಕಾರಿ ಸೇರಿದಂತೆ ಇತರೆ ತಿನ್ನುವ ಪದಾರ್ಥಗಳು ಆನ್‌ಲೈನ್‌ನಲ್ಲಿ ಲಭ್ಯವಿದೆಯೇ ವಿನಃ ಮದ್ಯಕ್ಕೆ ಸಂಬಂಧಿಸಿದ ವಸ್ತುಗಳ ಡೆಲಿವರಿ ಇಲ್ಲ. ಆದರೆ, ಇತ್ತೀಚಿನ ವರದಿ ಪ್ರಕಾರ, ಹೆಸರಾಂತ ಡೆಲಿವರಿ ಆ್ಯಪ್ಗಳಾದ ಸ್ವಿಗ್ಗಿ, ಝೊಮ್ಯಾಟೊ, ಬಿಗ್ ಬಾಸ್ಕೆಟ್ನಲ್ಲಿ ಬಿಯರ್, ವೈನ್ ಮತ್ತು ಲಿಕ್ಕರ್ ಡ್ರಿಂಕ್ಗಳನ್ನು ಶೀಘ್ರವೇ ಮನೆ ಬಾಗಿಲಿಗೆ ಡೆಲಿವರಿ ಮಾಡುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ಇಂತಹ ಸೇವೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಡೆಲಿವರಿ ಸಂಸ್ಥೆಗಳಂತು ಮದ್ಯವನ್ನು ತಮ್ಮ ಆ್ಯಪ್ಗಳಲ್ಲಿ ಪ್ರದರ್ಶಿಸುವುದು ಅಥವಾ ಮಾರಾಟ ಮಾಡುವುದನ್ನು ಪ್ರೋತ್ಸಾಹ ಮಾಡಿಲ್ಲ. ಆದ್ರೆ, ಮುಂಬರುವ ದಿನಗಳಲ್ಲಿ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ ಎಂದು ವರದಿ ಉಲ್ಲೇಖಿಸಿದೆ. ಪ್ರತ್ಯೇಕವಾಗಿ ಇದರಿಂದ ಉಂಟಾಗುವ ಲಾಭಗಳೇನು? ತೊಂದರೆಗಳೇನು? ಎಂಬುದನ್ನು ಚರ್ಚಿಸಲಾಗುತ್ತಿದೆ.
ಜಾರ್ಖಂಡ್ ಸರ್ಕಾರ ಮದ್ಯ ಡೆಲಿವರಿಗೆ ಅನುಮತಿ ಕೊಟ್ಟ ನಂತರವೇ ಸ್ವಿಗ್ಗಿ ತಮ್ಮ ಗ್ರಾಹಕರಿಗೆ ಮದ್ಯ ಸಪ್ಲೈ ಮಾಡಲು ನಿರ್ಧರಿಸಿತ್ತು. ಅವರ ಬೆನ್ನಲ್ಲೇ ಝೂಮ್ಯಾಟೋ ಕೂಡ ಮನೆ ಬಾಗಿಲಿಗೆ ಡೆಲಿವರಿ ಕೊಡಲು ಪ್ರಾರಂಭಿಸಿತು. ಇದೀಗ ಅದೇ ರೀತಿಯಲ್ಲಿ ಇತರೆ ರಾಜ್ಯಗಳು ಕೂಡ ಅನುಮತಿಯನ್ನು ಕೊಡಲಿದೆಯಾ ಎಂಬುದರ ಕುರಿತು ಚರ್ಚೆ ಶುರುವಾಗಿದೆ. "ಆನ್‌ಲೈನ್‌ನಲ್ಲಿ ಮದ್ಯ ವಿತರಣೆಯನ್ನು ಸಕ್ರಿಯಗೊಳಿಸುವ ಮೂಲಕ ಆಯಾ ರಾಜ್ಯಗಳು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸಬಹುದು, ಆರ್ಥಿಕ ಬೆಳವಣಿಗೆಯನ್ನು ದ್ವಿಗುಣಗೊಳಿಸಬಹುದು ಮತ್ತು ಜವಾಬ್ದಾರಿಯುತ ಹಾಗೂ ನಿಯಂತ್ರಿತ ಆಲ್ಕೋಹಾಲ್ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಜಾಗತಿಕ ಪ್ರವೃತ್ತಿಗಳೊಂದಿಗೆ ಹೊಂದಾಣಿಕೆ ಮಾಡಬಹುದು" ಎಂದು ಪಬ್ ಚೈನ್ ದಿ ಬಿಯರ್ ಕೆಫೆಯ ಮುಖ್ಯ ಕಾರ್ಯನಿರ್ವಾಹಕರಾದ ರಾಹುಲ್ ಸಿಂಗ್ ಹೇಳಿದ್ದಾರೆ.
ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಯೋಜನೆ ಯಶಸ್ವಿಯಾದರೆ, ತಮಿಳುನಾಡು, ಗೋವಾ, ಕೇರಳ, ಪಂಜಾಬ್, ಹರಿಯಾಣ, ನವದೆಹಲಿ ಮತ್ತು ಕರ್ನಾಟಕ ಸೇರಿದಂತೆ ಭಾರತದ ಇತರೆ ರಾಜ್ಯಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡು ನಂತರದಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಬಹುದು ಎಂದು ವರದಿಯಾಗಿದೆ,(ಏಜೆನ್ಸೀಸ್).