ನ್ಯೂಸ್

ಬಾಯಿಗೆ ಕಲ್ಲು ಹಾಕಿ, ತುಟಿಯನ್ನು ಗಮ್​ ಹಾಕಿ ಅಂಟಿಸಿದ ಸ್ಥಿತಿಯಲ್ಲಿ ಅರಣ್ಯದಲ್ಲಿ 15 ದಿನದ ಮಗು ಪತ್ತೆ! Newborn baby

Newborn baby : ಒಂದು ಮಗುವಾದರೂ ಆಗಲಿ ಅಂತ ಕಂಡ ಕಂಡ ದೇವರಿಗೆ ಹರಕೆಗಳನ್ನು ಕಟ್ಟಿಕೊಳ್ಳುವವರು ಒಂದೆಡೆಯಾದರೆ, ಹುಟ್ಟಿದ ಮಗುವನ್ನು ಅನಾಥವಾಗಿ ಬಿಟ್ಟು ಹೋಗುವವರು ಇನ್ನೊಂದೆಡೆ. ಇದನೆಲ್ಲ ನೋಡಿದರೆ ವಿಧಿಯಾಟ ಎಷ್ಟೊಂದು ವಿಚಿತ್ರ ಅಲ್ವಾ ಅನಿಸದೇ ಇರದು. ಈಗೇಕೆ ಈ ಮಾತು ಅಂದರೆ, ನಮ್ಮ ಮನಕಲಕುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

ಹದಿನೈದು ದಿನಗಳ ಮಗುವೊಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಆಘಾತಕಾರಿ ಸಂಗತಿ ಏನೆಂದರೆ, ಪತ್ತೆಯಾದ ಸಂದರ್ಭದಲ್ಲಿ ಮಗುವಿನ ತುಟಿಗಳನ್ನು ಅಂಟುಗಳಿಂದ ಅಂಟಿಸಲಾಗಿತ್ತು. ಅಲ್ಲದೆ, ಮಗುವಿನ ಬಾಯಿಯಲ್ಲಿ ಕಲ್ಲು ಕೂಡ ಪತ್ತೆಯಾಗಿದೆ. ಅಳುವುದು ಹೊರಗೆ ಕೇಳಿಸದಂತೆ ಈ ರೀತಿ ಮಾಡಲಾಗಿದೆ. ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ದನ ಕಾಯುತ್ತಿದ್ದ ವ್ಯಕ್ತಿಯೊಬ್ಬನ ಕಣ್ಣಿಗೆ ಮಗು ಕಾಣಿಸಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗು ಕಂಡ ಕೂಡಲೇ ದನಗಾಹಿ, ಅದರ ಬಾಯಿಯಿಂದ ಕಲ್ಲನ್ನು ಹೊರತೆಗೆದು, ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದನು. ಮಗುವಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಭಿಲ್ವಾರದ ಮಂಡಲ್‌ಗಢದ ಬಿಜೋಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ಮಗು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಪಾಲಕರನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತಿರದ ಆಸ್ಪತ್ರೆಗಳಲ್ಲಿನ ಹೆರಿಗೆ ದಾಖಲೆಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಹಳ್ಳಿಗಳ ಜನರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.

ಮಗುವಿನ ಅದೃಷ್ಟ ಚೆನ್ನಾಗಿದ್ದು, ಅಪಾಯಕಾರಿ ಪ್ರದೇಶದಿಂದ ಪವಾಡಸದೃಶವಾಗಿ ತಪ್ಪಿಸಿಕೊಂಡಿದೆ. ಆದರೆ, ಕೃತ್ಯವನ್ನು ಎಸಗಿದವರಿಗೆ ಮಾತ್ರ ಕಠಿಣ ಶಿಕ್ಷೆಯನ್ನು ನೀಡಬೇಕೆಂಬ ಆಗ್ರಹವು ಕೇಳಿಬಂದಿದೆ. (ಏಜೆನ್ಸೀಸ್​)