ಶಿರವಂತೆ ಗ್ರಾಮದಲ್ಲಿ ಆಯೋಜಿಸಿದ್ದ ನೇತ್ರ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ಲಯನ್ಸ್ ಸದಸ್ಯ ನಾಗರಾಜ್ ವೈಯಕ್ತಿಕವಾಗಿ ಕನ್ನಡಕ ವಿತರಿಸಿದರು. ಪ್ರಸನ್ನ, ಡಾ. ಕೀರ್ತಿ, ಡಾ. ಅನಿತಾ, ರಮ್ಯಾ ಇತರರಿದ್ದರು.  
ನ್ಯೂಸ್

ಲಯನ್ಸ್ ಸಂಸ್ಥೆಗಿದೆ ಸಾಮಾಜಿಕ ಕಳಕಳಿ

ಶಿವಕುಮಾರ ಎಸ್.ಪಿ.

ಸಾಗರ: ಸಂಘಟನಾತ್ಮಕ ಸಾಮಾಜಿಕ ಸೇವೆಯಲ್ಲಿ ಲಯನ್ಸ್ ಕ್ಲಬ್ನ ಸೇವೆ ದೊಡ್ಡದು. ಸಾಮಾಜಿಕ, ಶೈಕ್ಷಣಿಕ ಪರಿಸರ ಆರೋಗ್ಯ ಕ್ಷೇತ್ರದಲ್ಲಿ ಲಯನ್ಸ್ ಸೇವಾಹಸ್ತ ವಿಸ್ತರಿಸಿದೆ ಎಂದು ಲಯನ್ಸ್ ಸದಸ್ಯ ಇ.ನಾಗರಾಜ್ ಹೇಳಿದರು.

ಸಾಗರ ತಾಲೂಕಿನ ಶಿರವಂತೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಲಯನ್ಸ್ ಸಂಸ್ಥೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ವೈಯಕ್ತಿಕವಾಗಿ ಕನ್ನಡಕ ವಿತರಿಸಿ ಮಾತನಾಡಿದರು.

ನೇತ್ರದಾನ ಅತ್ಯಂತ ಪವಿತ್ರ ಕಾರ್ಯ. ಮನುಷ್ಯನಿಗೆ ಕಣ್ಣು ಅತ್ಯವಶ್ಯಕ ಅಂಗ. ಕಣ್ಣಿನ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಗಮನ ಹರಿಸಬೇಕು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಮೊದಲ ಹಂತದಲ್ಲಿ 62 ಜನರಿಗೆ ಕನ್ನಡಕ ನೀಡಲಾಗಿದೆ. ಲಯನ್ಸ್ ನಡೆಸುವ ಎಲ್ಲ ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಪ್ರಸನ್ನ ಮಾತನಾಡಿ, ಸಂಸ್ಥೆ ಒಂದು ವರ್ಷಗಳ ಕಾಲ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಲಯನ್ಸ್ ಸಾಮಾಜಿಕ ಕೆಲಸಕ್ಕೆ ದಾನಿಗಳು ಕೈಜೋಡಿಸಿದ್ದಾರೆ. ಸಮಾಜಮುಖಿ ಕೆಲಸ ಲಯನ್ಸ್ ಘೋಷವಾಕ್ಯಗಳಲ್ಲಿ ಒಂದಾಗಿದೆ. ಲಯನ್ಸ್ ಸಾಮಾಜಿಕ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ನೇತ್ರದಾನ ಮತ್ತು ರಕ್ತದಾನದಂತಹ ಚಟುವಟಿಕೆಗಳಲ್ಲಿ ಜನರು ಸ್ವಯಂಪ್ರೇರಿತವಾಗಿ ತೊಡಗಿಕೊಳ್ಳಬೇಕು ಎಂದರು.

ಡಾ. ಕೀರ್ತಿ, ಡಾ. ಕೆ.ಎಸ್.ಅನಿತಾ, ರಮ್ಯಾ ಭಾರದ್ವಾಜ್, ಸಚಿನ್, ವಿನಯಕುಮಾರ ಇತರರಿದ್ದರು.