ಎನ್.ಆರ್.ಪುರ: ಪ್ರಪಂಚದ 200 ದೇಶಗಳಲ್ಲಿ 45 ಸಾವಿರ ಲಯನ್ಸ್ ಕ್ಲಬ್‌ಗಳಿದ್ದು, 15 ಲಕ್ಷ ಜನ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಉಪ ಗವರ್ನರ್‌ಎಚ್.ಎಂ.ತಾರಾನಾಥ್ ಹೇಳಿದರು.
ಪಟ್ಟಣದಲ್ಲಿ ನಡೆದ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಇಲ್ಲಿನ ಕ್ಲಬ್ ಕರುಣೆಯ ಕಪಾಟು ನಿರ್ಮಿಸಿದ್ದು, ಅದರಲ್ಲಿ ನಾವು ಉಪಯೋಗಿಸಿದ ವಸ್ತುಗಳನ್ನು ಕರುಣೆಯ ಕಪಾಟಿನಲ್ಲಿಟ್ಟರೆ ಅಗತ್ಯವಿರುವವರು ತೆಗೆದುಕೊಂಡು ಹೋಗುತ್ತಾರೆ. ನಾವು ಇನ್ನೊಬ್ಬರ ನೋವನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ ಎಂದರು.
ನೂತನ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಸಂಸ್ಥೆ. ಸಮಾಜದಿಂದ ನಾವು ಪಡೆದಿರುವುದನ್ನು ಸಮಾಜಕ್ಕೆ ಹಿಂದಿರುಗಿಸಿ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಕನ್ನಡ ಮಾಧ್ಯಮದ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ನಿರ್ಗಮಿತ ಅಧ್ಯಕ್ಷ ಎಚ್.ಎಸ್.ರವಿಕುಮಾರ್ ಪ್ರಾಂತೀಯ ಅಧ್ಯಕ್ಷ ಸಿಜು, ವಲಯ ರಾಯಬಾರಿ ಎಂ.ಪಿ.ಸನ್ನಿ, ಜೇಮ್ಸ್,ಶಿವರಾಂ, ಪ್ರಭಾ ಪ್ರಕಾಶ್, ವಿಕ್ರಂ, ಪ್ರದೀಪ್, ಸಬಿತಾ ತಾರಾನಾಥ್, ತ್ರೇಸಿಯಮ್ಮ ಆಂಟೋನಿ, ದಕ್ಷಿಣಾಮೂರ್ತಿ, ಸುಮಾಸಜಿ ಇದ್ದರು.