ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಮಳೆ ಸೀಮಿತವಾಗಿದ್ದು, ಉಳಿದಂತೆ ಒಳನಾಡು ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ವರ್ಷಧಾರೆಯಾಗಿದೆ.
ಗುರುವಾರ ಉತ್ತರಕನ್ನಡ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವೆಡೆ ಸಾಧಾರಣ ಪ್ರಮಾಣದ ಮಳೆಯಾಗಿದೆ. ಜತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಬೆಳಗಾವಿ ಜಿಲ್ಲೆಯ ಕೆಲವೆಡೆ ಹಗುರದಿಂದ ಕೂಡಿದ ವರ್ಷಧಾರೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇದ್ದರೂ, ಮಳೆ ಸುರಿಯಲಿಲ್ಲ.
ಮುಂದಿನ 2-3 ದಿನ ಇದೇ ರೀತಿಯ ವಾತಾವರಣ ಇರಲಿದ್ದು, ಗಾಳಿಯ ವೇಗ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ವ್ಯಾಪ್ತಿಯಲ್ಲಿ ಮಾತ್ರ ಮಳೆ ಮುಂದುವರಿಯಲಿದ್ದು, ಒಳನಾಡು ಪ್ರದೇಶಗಳಲ್ಲಿ ಕ್ಷೀಣಿಸುವ ಸಾಧ್ಯತೆ ಇದೆ.
ವಾರಾಂತ್ಯದ ಬಳಿಕ ಮತ್ತೆ ಮಳೆ:
ಸದ್ಯ ಗೌರಿ ಗಣೇಶ ಹಬ್ಬದ ಮುನ್ನ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ. ಹಬ್ಬಕ್ಕೆ ಬಿಡುವ ನೀಡುವ ಸಾಧ್ಯತೆಯೂ ಇದೆ. ವಾರಾಂತ್ಯದ ಬಳಿಕ ಮತ್ತೆ ಜೋರು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.