ನ್ಯೂಸ್

ಸಿಡಿಲಾರ್ಭಟ ಜನರಿಗೆ ಸಂಕಟ|Lightning

ಜನಜೀವಕ್ಕೆ ವಿಪತ್ತಿನ ಬರ‘ಸಿಡಿಲು’

ವಿಲಾಸ ಮೇಲಗಿರಿಬೆಂಗಳೂರು: ಮುಂಗಾರು ಆಗಮನದ ಹಿಂದೆ, ಮುಂದೆ ಅಬ್ಬರಿಸುವ ಸಿಡಿಲು ಬಡಿತದ ಪ್ರಕರಣಗಳು ಸರ್ಕಾರಕ್ಕೆ ಸವಾಲಾಗುತ್ತಿವೆ(Lightning strike cases are becoming a challenge for the government). ಇತರ ವಿಪತ್ತುಗಳಿಗೆ ಹೋಲಿಸಿದಲ್ಲಿ ಸಿಡಿಲು ಬಡಿತ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪರಿಣಾಮ ಮಾತ್ರ ಭೀಕರವಾಗಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳಿಗೆ 571 ಜೀವಿಗಳು ಬಲಿಯಾಗಿದ್ದು, ಈ ಪೈಕಿ 240 ಜನರು ಸಿಡಿಲಿನಿಂದಲೇ ಜೀವ ತೆತ್ತಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ.

ಇನ್ನು 2011-2021ರ ಅವಧಿಯ ವರದಿ ಅವಲೋಕಿಸಿದರೆ 812 ಜನರು ಸಿಡಿಲಿಗೆ ಜೀವ ತೆತ್ತಿದ್ದಾರೆ. ಹೀಗಾಗಿ ಸಿಡಿಲ ವಿಕೋಪ ಎದುರಿಸುವುದು ಸರ್ಕಾರಕ್ಕೂ ಸಿಡಿಲು ಬಡಿದ ಅನುಭವ ತರಿಸಿದೆ. ಇತರ ವಿಪತ್ತುಗಳಿಗೆ ಹೋಲಿಸಿದರೆ ಸಿಡಿಲು ಪ್ರಕರಣಗಳು ಜನ ಜೀವನದ ಮೇಲೆ ಗುರುತರ ಪರಿಣಾಮ ಬೀರಿವೆ. ಸಿಡಿಲಿನಿಂದ ಜೀವ, ಆಸ್ತಿ, ಮೂಲಸೌಕರ್ಯ, ಜಾನುವಾರು ಮತ್ತು ಜೀವನೋಪಾಯಕ್ಕೆ ಹಾನಿ ಆಗುತ್ತಿದೆ. ಇದು ಸಮಾಜದ ದುರ್ಬಲ ವರ್ಗಗಳ ಮೇಲೆ (ಸಣ್ಣ ಮತ್ತು ಅತಿ ಸಣ್ಣ ರೈತರು, ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಕ್ಷೇತ್ರ ಅಧಿಕಾರಿಗಳು/ಉದ್ಯೋಗಿಗಳು ಇತ್ಯಾದಿ) ಪರಿಣಾಮ ಬೀರುತ್ತದೆ. ಹಾನಿ ಪ್ರಮಾಣ ತಗ್ಗಿಸಲು ಸರ್ಕಾರ ಅನೇಕ ಉಪಕ್ರಮ ಕೈಗೊಂಡಿದ್ದರೂ ನಿರೀಕ್ಷಿತ ಲಕೊಟ್ಟಿಲ್ಲ.

11 ಮಿಂಚಿನ ನಿಗಾ ಕೇಂದ್ರ

ರಾಜ್ಯದಲ್ಲಿ ಸಿಡಿಲಿನ ಹೊಡೆತದಿಂದಾಗುವ ನಷ್ಟವನ್ನು ತಗ್ಗಿಸಲು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಗುಡುಗು ಮತ್ತು ಸಿಡಿಲು ಸಂಭಾವ್ಯತೆ ಬಗ್ಗೆ ಮುನ್ನೆಚ್ಚರಿಕೆ ಒದಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಿದೆ. 11 ಲೈಟ್ನಿಂಗ್ ಡಿಟೆಕ್ಷನ್ ಸೆನ್ಸರ್ ಸ್ಟೇಷನ್‌ಗಳ ನೆಟ್‌ವರ್ಕ್ ಸ್ಥಾಪಿಸಲಾಗಿದೆ. ಆ ಮೂಲಕ ಮತ್ತು ನೈಜ ಸಮಯದಲ್ಲಿ ಸರ್ವರ್‌ಗೆ ಗುಡುಗು ಮತ್ತು ಮಿಂಚಿನ (ಕ್ಲೌಡ್‌ನಿಂದ ಕ್ಲೌಡ್ ಮತ್ತು ಕ್ಲೌಡ್‌ನಿಂದ ಗ್ರೌಂಡ್) ಡೇಟಾವನ್ನು ಒದಗಿಸುತ್ತದೆ.

ಆ್ಯಪ್ ಡೌನ್‌ಲೋಡ್ ಮಾಡಿ

ಸಿಡಿಲು ಬಡಿಯುವ ಸಂಭಾವ್ಯತೆ ಅರಿಯಲು ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಸಿಡಿಲು ಆ್ಯಪ್ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಿಂಚಿನ ದಾಳಿಗೆ 30 ರಿಂದ 45 ನಿಮಿಷಗಳ ಮೊದಲು ವಿವಿಧ ಬಣ್ಣಗಳಲ್ಲಿ ಮಾಹಿತಿ ಪ್ರದರ್ಶಿಸುವ ಮೂಲಕ ಅಪ್ಲಿಕೇಶನ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಸ್ಥಳದ ಒಂದು ಕಿಮೀ ವ್ಯಾಪ್ತಿಯೊಳಗೆ ಮಿಂಚಿನ ಹೊಡೆತದ ಶೇ.90 ಸಂಭವನೀಯತೆ ಇರುವುದರಿಂದ ಬಳಕೆದಾರರು ಅಪಾಯದ ವಲಯದಲ್ಲಿದ್ದಾರೆ ಎಂದು ಕೆಂಪು ಬಣ್ಣದಲ್ಲಿರುವ ಎಚ್ಚರಿಕೆ ಸೂಚಿಸುತ್ತದೆ. ಕಿತ್ತಳೆ ಬಣ್ಣವು 5 ಕಿ.ಮೀ ತ್ರಿಜ್ಯದಲ್ಲಿ ಮತ್ತು ಹಳದಿ 15 ಕಿ.ಮೀ. ತ್ರಿಜ್ಯದಲ್ಲಿ ಸಂಭವನೀಯ ಸಿಡಿಲು ಸಂದೇಶ ನೀಡುತ್ತದೆ.

ಮುಂಚಿತ ಮಾಹಿತಿ ಸವಾಲು

ಭೂಸ್ಥಿರ ಹವಾಮಾನ ಉಪಗ್ರಹ ಭೂಮಿಯಿಂದ 36,000 ಕಿಮೀ ಎತ್ತರದಿಂದ ಚಿತ್ರ ಸೆರೆಹಿಡಿಯುತ್ತದೆ. ಚಿತ್ರವನ್ನು ಸೆರೆಹಿಡಿಯಲು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಡೇಟಾ ಪ್ರಕ್ರಿಯೆಗೊಳಿಸಲು ಇನ್ನೊಂದು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಆದ್ದರಿಂದ ಯಾರಾದರೂ ಐಎಂಡಿಯ ವೆಬ್‌ಸೈಟ್‌ನಲ್ಲಿ ಉಪಗ್ರಹ ಚಿತ್ರಣ ನೋಡುವ ಹೊತ್ತಿಗೆ ಆಗಲೇ ಒಂದು ಗಂಟೆ ತಡವಾಗಿರುತ್ತದೆ. ಹಾಗಾಗಿ ಸಿಡಿಲು ಬಡಿತದ ಪ್ರಕ್ರಿಯೆಯನ್ನು ಬಹು ಮುಂಚೆಯೇ ತಿಳಿಯುವುದು ಕಷ್ಟ.

ಎಲ್ಲೆಲ್ಲಿ ಸಾವು ಹೆಚ್ಚು ?

ಮಲೆನಾಡು, ಕರಾವಳಿ ಭಾಗದಲ್ಲಿ ಸಿಡಿಲು ಹೆಚ್ಚು ಸಿಡಿಯುತ್ತವೆ. ಆದರೆ, ಅಲ್ಲಿ ಬೆಟ್ಟ, ಗುಡ್ಡ, ದೂರ ದೂರದ ಜನವಸತಿ, ಪಶ್ಚಿಮಘಟ್ಟಗಳ ಕಾರಣದಿಂದ ಜೀವ ಹಾನಿ ಕಡಿಮೆ. ಆದರೆ, ಸಮತಟ್ಟಾದ ಪ್ರದೇಶದಲ್ಲಿ ಸಿಡಿಲಿನಿಂದ ಮೃತಪಡುವವರ ಸಂಖ್ಯೆ ಅಧಿಕವಾಗಿದೆ.

ವರ್ಷ ವಿಪತ್ತಿನ ಒಟ್ಟು ಜೀವ ಹಾನಿ ಸಿಡಿಲು ಬಡಿದು ಸಾವು

2022-23 258 100

2023-24 120 61

2024-25 193 83

ಟಾಪ್ ಐದು ಜಿಲ್ಲೆ ಸಂಖ್ಯೆ

ಬೆಳಗಾವಿ 85

ವಿಜಯಪುರ 69

ಗದಗ 56

ಚಿತ್ರದುರ್ಗ/ತುಮಕೂರು 48

ಬೀದರ್ 44

ಕಡಿಮೆ ಪ್ರಕರಣ

ಜಿಲ್ಲೆ ಸಂಖ್ಯೆ:

ಕೊಡಗು/ರಾಮನಗರ 0

ಕೋಲಾರ/ಬೆಂಗಳೂರು ಗ್ರಾ., 1

ಬೆಂಗಳೂರು ನಗರ 2

ಹಾಸನ/ಚಿಕ್ಕಬಳ್ಳಾಪುರ 6

ಕಲಬುರಗಿ 7

ವಿಜಯನಗರ 10

ಸಿಡಿಲಿಂದ ಪಾರಾಗುವ ಕ್ರಮ

- ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರಿ

- ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು

- ಮೀನುಗಾರಿಕೆ, ದೋಣಿ ನಡೆಸುವುದು ಸವಾಲಿನ ಕಾರ್ಯ

- ಗುಡುಗು, ಸಿಡಿಲಿನ ವೇಳೆ ಸುರಕ್ಷಿತ ಕಟ್ಟಡಗಳನ್ನು ಆಶ್ರಯಿಸಿ

- ಲೋಹದ ತಗಡು ಹೊಂದಿರುವ ಮನೆಗಳು ಸುರಕ್ಷಿತವಲ್ಲ

- ಎತ್ತರದ ಪ್ರದೇಶ ಬಿಟ್ಟು ತಗ್ಗು ಪ್ರದೇಶಗಳನ್ನು ಆಶ್ರಯಿಸಿರಿ

- ವಿದ್ಯುತ್ ಉಪಕರಣ, ಸರಬರಾಜು ಮಾರ್ಗದಲ್ಲಿ ನಿಲ್ಲದಿರಿ

- ದೂರವಾಣಿ ಸಂಪರ್ಕ, ಮೊಬೈಲ್ ಟವರ್ ಸ್ಥಳ ಡೇಂಜರ್

- ಸಿಡಿಲ ವೇಳೆ ಗುಂಪುಗುಂಪಾಗಿರದೆ ಅಂತರ ಕಾಯ್ದುಕೊಳ್ಳಿ

- ಮಂಡಿಯೂರಿ ಕುಳಿತುಕೊಂಡು ಕಿವಿಗಳನ್ನು ಮುಚ್ಚಿಕೊಳ್ಳಿ

- ಕಬ್ಬಿಣದ ಸರಳುಗಳ ಛತ್ರಿ/ಮೊಬೈಲ್ ೆನ್ ಬಳಸದಿರಿ

- ಸಿಡಿಲ ವೇಳೆ ಸ್ನಾನ ಹಾಗೂ ಶವರ್ ತೆಗೆದುಕೊಳ್ಳಬಾರದು

- ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದೂ ಡೇಂಜರ್