ನ್ಯೂಸ್

ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಲಘು ವಿಮಾನ ಪತನ; Video Viral

Plane Crashes: ಲಂಡನ್ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಭಾನುವಾರ (ಜು.13) ಮಧ್ಯಾಹ್ನ ಸಣ್ಣ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದ್ದು (Video), ವಿಮಾನ ರದ್ದತಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಪಘಾತದಿಂದಾಗಿ ಭಾನುವಾರ ಮಧ್ಯಾಹ್ನ ಕನಿಷ್ಠ ನಾಲ್ಕು ನಿಗದಿತ ವಿಮಾನಗಳ ಹಾರಾಟ ರದ್ದಾಯಿತು. ವಿಮಾನದಲ್ಲಿ ಎಷ್ಟು ಜನರಿದ್ದರು ಅಥವಾ ಅವರ ಸ್ಥಿತಿಯ ಬಗ್ಗೆ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

ಬ್ರಿಟಿಷ್ ಮಾಧ್ಯಮಗಳು ಹಂಚಿಕೊಂಡ ವಿಡಿಯೋ, ಫೋಟೋಗಳಲ್ಲಿ ಲಂಡನ್‌ನಿಂದ ಪೂರ್ವಕ್ಕೆ ಸರಿಸುಮಾರು 56 ಕಿಮೀ ದೂರದಲ್ಲಿರುವ ವಿಮಾನ ನಿಲ್ದಾಣದ ಮೇಲೆ ವಿಮಾನ ಸ್ಪೋಟಗೊಂಡಿರುವುದನ್ನು ಕಾಣಬಹುದು.

ವೈದ್ಯಕೀಯ ಸಾರಿಗೆ ಸಾಗಿಸುತ್ತಿದ್ದ ಜೆಟ್‌ ಬೀಚ್‌ಕ್ರಾಫ್ಟ್‌ ಬಿ200 ಸೂಪರ್‌ ಕಿಂಗ್‌ ವಿಮಾನವು ಸುಮಾರು 12 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಬ್ರಿಟಿಷ್‌ ಮಾಧ್ಯಮ ವರದಿ ಮಾಡಿದೆ.

ಈ ವಿಮಾನವನ್ನು ನೆದರ್‌ಲ್ಯಾಂಡ್ಸ್ ಮೂಲದ ಜ್ಯೂಷ್ ಏವಿಯೇಷನ್ ಕಂಪನಿ ನಿರ್ವಹಿಸುತ್ತಿತ್ತು. ಇದು ಭಾನುವಾರ ಮುಂಜಾನೆ ಗ್ರೀಸ್‌ನ ಅಥೆನ್ಸ್‌ನಿಂದ ಕ್ರೊಯೇಷಿಯಾದ ಪುಲಾಗೆ ಮತ್ತು ನಂತರ ಸೌತೆಂಡ್‌ಗೆ ಹಾರಿತ್ತು. ಆ ಸಂಜೆ ಅದು ನೆದರ್‌ಲ್ಯಾಂಡ್ಸ್‌ನ ಲೆಲಿಸ್ಟಾಡ್‌ಗೆ ಹಿಂತಿರುಗಬೇಕಿತ್ತು.

ಪೊಲೀಸರು, ತುರ್ತು ಸೇವೆಗಳು ಮತ್ತು ವಾಯು ಅಪಘಾತ ತನಿಖಾಧಿಕಾರಿಗಳು ಅಪಘಾತದ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್​)