ನುಗ್ಗೇಹಳ್ಳಿ: ಜಗತ್ತಿನಲ್ಲಿ ಜ್ಞಾನದ ಮುಂದೆ ಯಾವುದೂ ದೊಡ್ಡದಲ್ಲ. ಜ್ಞಾನಮಾರ್ಗದಲ್ಲಿ ಸಾಗಿದರೆ ಬದುಕು ಉಜ್ವಲವಾಗುತ್ತದೆ ಎಂದು ಹಾಸನ ಎವಿಕೆ ಕಾಲೇಜ್ ಪ್ರಾಂಶುಪಾಲ ಡಾ.ಎಸ್.ಸಿ.ಯತೀಶ್ವರ್ ತಿಳಿಸಿದರು.
ನುಗ್ಗೇಹಳ್ಳಿ ಪಿ.ಎಚ್.ದೇಶಪಾಂಡೆ ಪಬ್ಲಿಕ್ ಶಾಲೆಯ 15ನೇ ವರ್ಷದ ಹೊಯ್ಸಳ ಉತ್ಸವದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಋಷಿಮುನಿಗಳ ಕಾಲದಿಂದಲೂ ಭಾರತ ದೇಶದ ಜ್ಞಾನದ ಶಕ್ತಿ ಜಗತ್ತಿಗೆ ತಿಳಿದಿದೆ. ನಿತ್ಯ ಏಕಾಗ್ರತೆಯಿಂದ ಸ್ವಲ್ಪ ಸಮಯ ಧ್ಯಾನ ಮಾಡಿ ಜ್ಞಾನ ಸಂಪಾದಿಸಿಕೊಂಡರೆ ಶಿಕ್ಷಣದ ಮಹತ್ವ ಉನ್ನತಿಯಾಗಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಮಕ್ಕಳಿಗೆ ಮೂಲಜ್ಞಾನದ ಪರಂಪರೆ ಬಿಟ್ಟು ಬೇರೊಂದು ಜ್ಞಾನದ ಪರಂಪರೆ ಕಡೆ ಕರೆದೊಯ್ಯುತ್ತಿದ್ದೇವೆ. ಆ ದೃಷ್ಟಿಯಿಂದ ಕರುಣೆ, ಪ್ರೀತಿ, ಅನುಕಂಪ, ಸೌಹಾರ್ದತೆ, ಸಂಸ್ಕಾರ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುವುದು ಮುಖ್ಯವಾಗಿದೆ ಎಂದರು.
ಹುಟ್ಟುಹಬ್ಬದ ಸಂದರ್ಭಗಳಲ್ಲಿ ಮೇಣದಬತ್ತಿ ಹಚ್ಚಿ ಹಾರಿಸುವುದು ಭಾರತೀಯ ಸಂಸ್ಕೃತಿಯಲ್ಲ. ಬದಲಾಗಿ ದೀಪ ಜ್ಯೋತಿ ಬೆಳಗಿಸಿ, ಸಾಧ್ಯವಾದರೆ ಒಂದು ಗಿಡ ನೆಟ್ಟು ಬೆಳೆಸಿದರೆ ಪರಿಸರಕ್ಕೆ ಕೊಡುಗೆಯಾಗುತ್ತದೆ. ಸಮಾಜಕ್ಕೆ ರಾಷ್ಟ್ರಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಮಾತನಾ, ಪಾಲಕರು ಮಕ್ಕಳಿಗೆ ಮೊಬೈಲ್ ನೀಡುವುದು ಬಿಟ್ಟು, ಓದಿನ ಕಡೆ ಗಮನ ನೀಡಬೇಕು ಎಂದು ಎಚ್ಚರಿಸಿದರು.
ದೇಶಪಾಂಡೆ ಪಬ್ಲಿಕ್ ಶಾಲೆ ಕಾರ್ಯದರ್ಶಿ ಎನ್.ಎಲ್.ಶಶಿಕಲಾ, ಮಂಜುನಾಥ್, ಬಿಆರ್‌ಸಿ ಕೆ.ಎನ್.ಅನಿಲ್, ಇಸಿಒ ಕರಿಯಪ್ಪಗೌಡ, ಬಿಆರ್‌ಸಿ ಎಸ್.ಶ್ರೀಕಾಂತ್, ಸಿಆರ್‌ಪಿ ಎಚ್.ಟಿ. ಮಂಜೇಗೌಡ, ಡಾ.ಶಿವರಾಂ, ಮುಖ್ಯ ಶಿಕ್ಷಕ ಜೆ.ಎಲ್.ರವಿ, ಶ್ರೀನಿವಾಸ್, ಧರ್ಮಪ್ಪ, ಕನಕಲತಾ ರವೀಶ್, ಸರೋಜಾ ಕೆಂಪರಾಜ್, ಉಷಾರಾಜ್, ವಿಶ್ವಾಸ್, ಚಿನ್ಮಯಿ, ಚಿರಾಗ್, ರೋಜಾ, ರೇಷ್ಮಾ, ವಾಸು, ಮಲ್ಲೇಶ್, ಶಿಕ್ಷಕರುಗಳು ಇತರರು ಹಾಜರಿದ್ದರು.