ನ್ಯೂಸ್

ಬೆಂಕಿ ಹಚ್ಚಿ ಪತ್ನಿಯ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಮದ್ಯ ಸೇವನೆಗೆ ಹಣಕ್ಕಾಗಿ ಗಲಾಟೆ ಮಾಡಿ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಹೆಚ್ಚುವರಿ ಸಿಟಿ ಸಿವಿಲ್ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಆರ್.ಟಿ.ನಗರದ ತಿಮ್ಮಯ್ಯ ಗಾರ್ಡನ್ 6ನೇ ಅಡ್ಡ ರಸ್ತೆ ನಿವಾಸಿ ಎಚ್.ಆರ್. ವೆಂಕಟೇಶಮೂರ್ತಿ ಅಪರಾಧಿ. 2000ರ ಸೆಪ್ಟೆಂಬರ್ 3ರಂದು ಪತ್ನಿ ಕೆ. ಸುಮಿತ್ರಾ ಎಂಬಾಕೆ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ್ದ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಾಲಚಂದ್ರ ಭಟ್, ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.

1997ರ ಮಾರ್ಚ್ 16ರಂದು ವೆಂಕಟೇಶಮೂರ್ತಿ ಮತ್ತು ಸುಮಿತ್ರಾ ಮದುವೆ ಆಗಿದ್ದು, ಹೆಣ್ಣು ಮಗುವಿದೆ. ಅಪರಾಧಿ ಕೆಲಸಕ್ಕೆ ಹೋಗದೆ ಮದ್ಯ ವ್ಯಸನಿಯಾಗಿ ಹಣಕ್ಕಾಗಿ ಪತ್ನಿ ಬಳಿ ಗಲಾಟೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದ. 2000ರ ಸೆಪ್ಟೆಂಬರ್ 3ರಂದು ಸುಮಿತ್ರಾ ಹಣ ನೀಡಲಿಲ್ಲವೆಂದು ಬೆಂಕಿ ಹಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಸಾಯುವ ಮುನ್ನ ಸುಮಿತ್ರಾ, ವೈದ್ಯಾಧಿಕಾರಿಗೆ ತನ್ನ ಪತಿ ಕೃತ್ಯದ ಬಗ್ಗೆ ಹೇಳಿಕೆ ದಾಖಲಿಸಿದ್ದಳು. ಆರ್.ಟಿ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.