ಜೀವನದಲ್ಲಿ ನಾವು ರೂಢಿಸಿಕೊಳ್ಳಲೇಬೇಕಾದ ಆಯಾಮಗಳು ಇನ್ನಷ್ಟಿವೆ. ಸಕಲ ಜೀವಿಗಳಲ್ಲಿ ಅನುಕಂಪ, ದಯೆ ಸಹಾನುಭೂತಿ, ನಿಸ್ವಾರ್ಥ, ಕಾರ್ಯ ತತ್ಪರತೆ, ಮಾನಸಿಕ ಸ್ಥಿರತೆ ಬಿಗುಮಾನ ಬಿಟ್ಟು, ನಗುವನ್ನು ಹೊರಸೂಸುತ್ತಾ ವಿಶ್ವಾಸದಿಂದ ಮುನ್ನಡೆಯಬೇಕು. ಅನವಶ್ಯಕ ಮಾತು ಕತೆಗಳನ್ನು ಕ್ಷುಲ್ಲಕ ವ್ಯವಹಾರಗಳನ್ನು ನಿಲ್ಲಿಸಿ, ಪೂರ್ವಾಪರ ವಿಮಶಿಸುತ್ತಾ, ವಿವೇಕಶೀಲರಾಗಿ ಮನಸ್ಸನ್ನು ಪ್ರಸನ್ನವಾಗಿ ಇಟ್ಟುಕೊಂಡರೆ, ಎಂಥ ಜಟಿಲ ಸಮಸ್ಯೆಗಳನ್ನೂ ಸರಿಪಡಿಸಿಕೊಳ್ಳ ಬಹುದು. ಈ ಎಲ್ಲ ಆಯಾಮಗಳನ್ನು, ಸದ್ಭಾವಗಳನ್ನು ಎಲ್ಲ ಧರ್ಮಗ್ರಂಥಗಳೂ ಬೋಧಿಸುತ್ತವೆ. ಇವೆಲ್ಲವುಗಳನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳದಿದ್ದರೆ ನಮ್ಮ ಬದುಕು ರಣರಂಗವಾಗುತ್ತದೆ. ‘ಒಳಗಣ ರಣರಂಗ, ಹೊರಗಣ ಶ್ರಂಗಾರವದೇನೊ?’ ಎಂಬ ಅಲ್ಲಮ ಪ್ರಭುಗಳ ಪ್ರಶ್ನೆಗೆ ನಮ್ಮ ಬದುಕೇ ಉತ್ತರವಾಗುತ್ತದೆ. ಮನಸ್ಸಿನಲ್ಲಿ ಕೋಪ, ತಾಪ, ಚಿಂತೆ, ಭಯ, ದ್ವೇಷ ಅಸೂಯೆಗಳಿಗೆ ಇಂಬುಗೊಟ್ಟರೆ ಬದುಕು ಭವಾರಣ್ಯವಾಗುತ್ತದೆ. ಬದುಕುವ ಮನುಷ್ಯ ಜೀವನವನ್ನು ಕ್ರಮಬದ್ಧವಾಗಿ ಸಂಸ್ಕಾರದಿಂದ, ಸಾಧನೆಯಿಂದ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು. ವ್ಯಕ್ತಿಯ ಅಭ್ಯುದಯ ಸಮಾಜದ ಕಲ್ಯಾಣವನ್ನು ಬಯಸುತ್ತಾ ಶಾಂತಿ-ಸಂತೃಪ್ತಿಯನ್ನು ಹೊಂದಬೇಕು. ಜೀವ (ಪ್ರಾಣ) ನಮ್ಮ ಮಾತನ್ನು ಕೇಳುವದಿಲ್ಲ. ಜೀವನ ನಮ್ಮ ಮಾತನ್ನು ಕೇಳುತ್ತದೆ ಎಂಬುದೊಂದು ನಾಣ್ಣುಡಿ. ಅದರಂತೆ ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಆದರ್ಶಯುಕ್ತವಾಗಿ ಕಟ್ಟಿಕೊಳ್ಳುವ ಸ್ವಾತಂತ್ರ್ಯ ನಮಗೆ ಇದ್ದೇ ಇದೆ. ಸಹಜ ಪ್ರವೃತ್ತಿಯಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ. ಏಕೆಂದರೆ ನಿಸರ್ಗದ ನಿಯಮದಂತೆ ದೇಹದ ಬದಲಾವಣೆ ಆಗುವುದು. ಮುಪ್ಪು ಬರುವುದು, ಸಾವು ಬರುವದು, ಹಣ್ಣಾದ ಎಲೆ ಉದುರುವದು. ಇವೆಲ್ಲವೂ ಈ ಜಗದ ನಿಯಮಗಳಾಗಿದ್ದು ಅವು ನಡೆಯುತ್ತವೆ. ಆದರೆ ಇನ್ನೊಂದು ಪ್ರಯತ್ನಪೂರ್ವಕ ಪ್ರವೃತ್ತಿ ಸಾಧ್ಯ ಇದೆ. ಅದುವೇ ಜೀವನದಲ್ಲಿ ಸಾಧಿಸಬೇಕಾದದ್ದು. ನಾವು ಅಂದುಕೊಂಡಿದ್ದನ್ನು ಸಾಧಿಸಲು ನಿರಂತರ ನಮ್ಮ ಪ್ರಯತ್ನ ಬೇಕೆ ಬೇಕು. ಜೊತೆಗೆ ಆ ದೇವನ ಅನುಗ್ರಹವೂ ಬೇಕು. ಜೀವ-ಜೀವನದ ಮಧ್ಯದಲ್ಲಿರುವ ಅವಕಾಶವನ್ನು ಸಾರ್ಥಕಪಡಿಸಿ ಕೊಳ್ಳುವಲ್ಲಿ ನಾವು ಸ್ವತಂತ್ರರು.