ಹಾಗೆಯೇ ಮಡದಿ- ಮಕ್ಕಳು ಒಡಹುಟ್ಟಿದವರು, ಬಂಧು-ಬಳಗವನ್ನೆಲ್ಲ ಅಗಲಿ ಹೋಗಬೇಕಾದುದು ಕೂಡ ಸಹಜ. ಪ್ರೀತಿಗೆ ಪಾತ್ರವಾದ ವ್ಯಕ್ತಿ-ವಸ್ತುಗಳೆಲ್ಲ ದೂರವಾಗುವುದೂ, ಕೊನೆಗೊಂದು ದಿನ ಈ ದೇಹದಿಂದ ಪ್ರಾಣವಾಯುವು ಹಾರಿಹೋಗುವದೂ ಸಹಜ. ಸತ್ಯವೆಂದರೆ ಇವಾವುಗಳನ್ನೂ ತಡೆದು ನಿಲ್ಲಿಸಲಿಕ್ಕಾಗುವುದಿಲ್ಲ. ನಮ್ಮ ಮಾತನ್ನು ಇವಾವುವೂ ಕೇಳುವುದಿಲ್ಲ. ಏಕೆಂದರೆ ಹುಟ್ಟು-ಸಾವು ನಮ್ಮ ಕೈಯೊಳಗಿಲ್ಲ. ಆದರೆ ಹುಟ್ಟು-ಸಾವಿನ ಮಧ್ಯದಲ್ಲಿರುವ ಅವಧಿ (ಸಮಯ)ಯು ಮಾತ್ರ ನಮ್ಮ ಕೈಯೊಳಗಿದೆ. ಅದಕ್ಕೇ ಹೇಳಿದ್ದು ಜೀವ ನಮ್ಮ ಮಾತು ಕೇಳುವುದಿಲ್ಲ, ಜೀವನ ನಮ್ಮ ಮಾತನ್ನು ಕೇಳುತ್ತದೆ ಎಂದು. ಜೀವನ ಎಂದರೆ ಬದುಕುವ ರೀತಿ. ಹುಟ್ಟಿನ ಮೊದಲು ಏನುಇತ್ತು, ಏನಾಗಿತ್ತು ಎಂಬುದು ನಮಗೆ ತಿಳಿಯದು! ಸಾವಿನ ಆಚೆಗೆ ಏನು ಎಂಬುದೂ ನಮಗೆ ತಿಳಿಯದ ರಹಸ್ಯ.
ಹುಟ್ಟು ಸಾವಿನ ಮಧ್ಯ ಇರುವ ಕಾಲಾವಕಾಶವೇ ಸತ್ಯವೆಂದು ಸರ್ವಸ್ವವೆಂದು ತಿಳಿದುಕೊಂಡವರು ನಾವು. ಇದೇ ನಿಜ ಬದುಕು ಎಂದು ಭಾವಿಸಿದ್ದೇವೆ. ಜೀವಿಸಿಕೊಂಡಿರುವುದೇ ಬದುಕಲ್ಲ. ಬದುಕು ಎಂಬುದರರ್ಥ ಬದುಕಿಗೆ ಬೇಕಾದ ಆಯಾಮಗಳನ್ನು ರೂಢಿಸಿಕೊಳ್ಳುವುದು ಹಾಗೂ ಸಂಗ್ರಹಿಸಿಕೊಳ್ಳುವುದು. ನಾವು ರೂಢಿಸಿಕೊಳ್ಳಲೇಬೇಕಾದ ಆಯಾಮಗಳು ಯಾವುವು ಅಂದರೆ ಮನ ಶುಚಿಯಾಗಿಟ್ಟುಕೊಳ್ಳುವುದು, ಕರಣಾದಿಗಳನ್ನು ಮೆಟ್ಟಿ ನಿಲ್ಲುವುದು, ಹಿಡಿದ ಭಕ್ತಿಯ ಕಡೆತನಕ ಬಿಡದೆ, ಉರಿ-ಸಿರಿ ಎಡರು ಕಂಟಕಗಳು ಬಂದಲ್ಲಿ ಚಿಂತೆಯಿಂದಾ ಕಾಂತಿಗುಂದದೆ (ಧೃತಿಗೆಡದೆ), ಲೋಕದ ರಂಜನೆಗೆ ಮೋಸಹೋಗದೆ, ದುರ್ವಿಷಯಕ್ಕೆ ಹರಿಯದೇ, ದೇಹದಿಚ್ಚೆಗೆ ಕೆಡದೆ, ತ್ರಿವಿಧವ ತ್ರಿವಿಧಕ್ಕೆ (ಗುರು,ಲಿಂಗ,ಜಂಗಮಕ್ಕೆ ತನು, ಮನ, ಧನವ) ಅರ್ಪಿಸಿ, ಸಜ್ಜನ ಸದ್ಭಾವಿಯಾಗಿ ಬದುಕುವುದೇ ಆಗಿದೆ.