ಎಂ.ಕನಗವಲ್ಲಿ 
ನ್ಯೂಸ್

ಇಕೆವೈಸಿಗೆ ಹಣ ಪಡೆದರೆ ಪರವಾನಗಿ ರದ್ದು: ನ್ಯಾಯಬೆಲೆ ಅಂಗಡಿಗಳಿಗೆ ಎಂ.ಕನಗವಲ್ಲಿ ಎಚ್ಚರಿಕೆ- Kanagavalli warns fair price shops

ಇಕೆವೈಸಿಗೆ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇಕೆವೈಸಿಗೆ ಹಣ ಪಡೆದಿರುವುದು ಸೇರಿ ಕಡಿಮೆ ರೇಷನ್ ವಿತರಿಸುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ 3-4 ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಪಡಿಸಲಾಗಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿ ಹೇಳಿದ್ದಾರೆ.

ಬೆಂಗಳೂರು: ( License cancellation if money is charged for e-KYC) ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆಗೆ(ಇಕೆವೈಸಿ) ಕಾರ್ಡ್‌ದಾರರಿಂದ ಹಣ ಪಡೆಯುವುದು, ಕಡಿಮೆ ಪಡಿತರ ವಿತರಿಸುವುದು ಮತ್ತು ದಸ್ತಾನು ಫಲಕ ಪ್ರದರ್ಶಿಸದಿರುವುದು ಸೇರಿ ಇತರ ನಿಯಮ ಉಲ್ಲಂಸಿದರೆ ಮುಲ್ಲಾಜಿಲ್ಲದೆ ಪರವಾನಗಿ ರದ್ದುಪಡಿಸುವುದಾಗಿ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗಳ ವರ್ತಕರಿಗೆ ಎಚ್ಚರಿಕೆ ಕೊಟ್ಟಿದೆ.

ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಇಲಾಖೆಯಿಂದ ರಾಜ್ಯಾದ್ಯಂತ ಇಕೆವೈಸಿ ಪ್ರಕ್ರಿಯೆ ನಡೆಸುತ್ತಿದೆ. ಬಿಪಿಎಲ್ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಬೇಕು. ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಇಕೆವೈಸಿಗೆ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇಕೆವೈಸಿಗೆ ಹಣ ಪಡೆದಿರುವುದು ಸೇರಿ ಕಡಿಮೆ ರೇಷನ್ ವಿತರಿಸುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ 3-4 ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಪಡಿಸಲಾಗಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿ ಹೇಳಿದ್ದಾರೆ.

ಇಕೆವೈಸಿ ಮಾಡುವ ನ್ಯಾಯಬೆಲೆ ಅಂಗಡಿಯವರಿಗೆ ಸರ್ಕಾರವೇ ಹಣ ಕೊಡುತ್ತಿದೆ. ಹಾಗಾಗಿ, ಕಾರ್ಡ್‌ದಾರರು ಹಣ ಕೊಡುವ ಅಗತ್ಯವಿಲ್ಲ. ಹಣಕ್ಕೆ ಬೇಡಿಕೆ ಇಟ್ಟರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಥವಾ ಆಯುಕ್ತರ ಕಚೇರಿಗೆ ದೂರು ನೀಡಬಹುದು. ಅ.20ವರೆಗೆ ಇಕೆವೈಸಿ ಅವಧಿ ವಿಸ್ತರಿಸಲಾಗಿದೆ. ಅ.1ರಿಂದ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆಯಬೇಕೆಂದು ಆದೇಶ ಹೊರಡಿಸಿದ್ದೇವೆ. ಕಾರ್ಡ್‌ದಾರರು ಅನುಕೂಲಕರ ಸಮಯದಲ್ಲಿ ಪಡಿತರ ಪಡೆದುಕೊಳ್ಳಬಹುದು ಎಂದರು.

ಅಮಾನತು ಅಂಗಡಿಗಳ ವಿವರ:

* ಇಕೆವೈಸಿ ಮಾಡಿದ್ದಕ್ಕೆ ಕಾರ್ಡ್‌ದಾರರಿಂದ 500 ರೂ. ಪಡೆದ ಹಿನ್ನೆಲೆ ಬೆಂಗಳೂರಿನ ‘ಚಂದ್ರಪ್ಪನಗರ ಆರ್‌ಸಿಎಚ್‌ಎಸ್’ ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

* ಪಡಿತರ ಅಕ್ಕಿ ದುರುಪಯೋಗ ಕಾರಣ ಬೆಂಗಳೂರಿನ ಭುವನೇಶ್ವರಿ ಸಿಸಿಎಸ್ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು

* ಪಡಿತರ ಬದಲು ಕಾರ್ಡ್‌ದಾರರಿಗೆ ಹಣ ವಿತರಿಸುತ್ತಿದ್ದ ಹುಬ್ಬಳ್ಳಿಯ ದೇವಾಂಗಪೇಟ್‌ನಲ್ಲಿರುವ ಬಸವೇಶ್ವರ ಪ್ರಗತಿ ಪರ ಸಂಘದ ಪರವಾನಗಿ ರದ್ದು