ನ್ಯೂಸ್

ಎಲ್​ಐಸಿ ಆರಂಭಿಕ ಷೇರು ಮಾರಾಟ: ಮೊದಲ ದಿನವೇ 5,627 ಕೋಟಿ ರೂ. ಬಿಡ್​

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಆರಂಭಿಕ ಷೇರು ಮಾರಾಟ (ಐಪಿಒ) ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಮೊದಲ ದಿನವೇ 5,627 ಕೋಟಿ ರೂ. ಬಿಡ್​ ಸಲ್ಲಿಕೆ ಆಗಿದೆ. ಸಂಜೆ 5ರವರೆಗೆ 10 ಕೋಟಿ ಈಕ್ವಿಟಿ ಷೇರುಗಳಿಗೆ ಬೇಡಿಕೆ ಸಲ್ಲಿಕೆ ಆಗಿದ್ದು, ಏಳು ತಾಸಿನಲ್ಲಿ ಶೇ. 67ರಷ್ಟು ಗ್ರಾಹಕರು ಷೇರು ಕೊಳ್ಳಲು ಆಸಕ್ತಿ ತೋರಿದರು.

ರಿಟೇಲ್​ ಹೂಡಿಕೆ ವಿಭಾಗದಲ್ಲಿ ಶೇ. 0.55, ಸಾಂಸ್ಥಿಕೇತರ ಹೂಡಿಕೆಯಲ್ಲಿ ಶೇ. 0.33, ಎಲ್​ಐಸಿ ಉದ್ಯೋಗಿಗಳ ಕೊಟಾದಲ್ಲಿ ಶೇ. 1.02 ಮತ್ತು ಪಾಲಿಸಿದಾರರ ಕೋಟಾದಲ್ಲಿ ಶೇ. 1.82 ಬಿಡ್​ಗಳು ಸಲ್ಲಿಕೆ ಆಗಿವೆ. ಬೇಡಿಕೆ ಹೆಚ್ಚಿರುವ ಕಾರಣ ಶನಿವಾರವೂ (ಮೇ 7) ಷೇರು ಖರೀದಿಗೆ ಬಿಡ್​ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇ 9ಕ್ಕೆ ಐಪಿಒ ಬಿಡ್​ ಕೊನೆಗೊಳ್ಳಲಿದೆ. ಪ್ರತಿ ಷೇರಿಗೆ 902ರಿಂದ 949 ರೂಪಾಯಿ ಒಳಗೆ ದರ ನಿಗದಿ ಮಾಡಲಾಗಿದ್ದು, 22.14 ಕೋಟಿ ಷೇರುಗಳನ್ನು (ಶೇ. 3.5) ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ. ಈ ಮೂಲಕ 21 ಸಾವಿರ ಕೋಟಿ ರೂಪಾಯಿ ಹೂಡಿಕೆ ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಎಲ್​ಐಸಿ ಉದ್ಯೋಗಿಗಳಿಗೆ ಪ್ರತಿ ಷೇರಿನಲ್ಲಿ 45 ರೂ. ಮತ್ತು ಪಾಲಿಸಿದಾರರಿಗೆ 60 ರೂ. ರಿಯಾಯಿತಿ ಇದೆ.