ಮುಂಬೈ: ಐಪಿಒ ಮಾರುಕಟ್ಟೆಯ ಇದುವರೆಗಿನ ಅತಿದೊಡ್ಡ ಐಪಿಒ ಎಂದೇ ಖ್ಯಾತಿಪಡೆದಿರುವ ಎಲ್ಐಸಿ ಷೇರು ಮೌಲ್ಯ ಗುರುವಾರವೂ ಶೇ.4 ಕುಸಿತ ಕಂಡು, 804.2ಕ್ಕೆ ಇಳಿದಿದೆ. ಮಂಗಳವಾರವಷ್ಟೇ ಲಿಸ್ಟಿಂಗ್ ಆಗಿದ್ದ ಎಲ್ಐಸಿ ಷೇರು ಮೌಲ್ಯ ವಿತರಣಾ ದರಕ್ಕಿಂತಲೂ ಕೆಳಕ್ಕೆ ಕುಸಿದು ಹೂಡಿಕೆದಾರರಿಗೆ ಬರೋಬ್ಬರಿ 68,100 ಕೋಟಿ ರೂಪಾಯಿ ನಷ್ಟ ಉಂಟುಮಾಡಿದೆ. ಷೇರುಪೇಟೆಯಲ್ಲಿ ಭಾರಿ ಏರಿಳಿತ ಇರುವ ಸಂದರ್ಭದಲ್ಲೇ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಿದ ಎಲ್ಐಸಿಯ ಮಾರುಕಟ್ಟೆ ಮೌಲ್ಯ ದಿನೇದಿನೆ ಕುಸಿಯುತ್ತಿದೆ. ಎಲ್ಐಸಿ ಷೇರಿನ ಹಂಚಿಕೆ ದರ 949 ರೂ. ಇತ್ತು. ಆಗ ಎಲ್ಐಸಿಯ ಮಾರುಕಟ್ಟೆ ಬಂಡವಾಳ 6,00,242 ಕೋಟಿ ರೂ.ಇತ್ತು. ಗುರುವಾರದ ನಷ್ಟದ ಬಳಿಕ ಮಾರುಕಟ್ಟೆ ಬಂಡವಾಳ 5,31,932.31 ಕೋಟಿ ರೂ.ಆಗಿದೆ.
ಮೊದಲ ದಿನದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ನಲ್ಲಿ ಎಲ್ಐಸಿ ಷೇರು ಮೌಲ್ಯ ಐಪಿಒ ವಿತರಣಾ ದರ 949 ರೂ.ಗಿಂತ ಶೇಕಡ 7.75 ಕುಸಿದು 875.45 ರೂ.ನಲ್ಲಿ ವಹಿವಾಟು ಮುಗಿಸಿದೆ. ಆದಾಗ್ಯೂ, ಇದು ಲಿಸ್ಟಿಂಗ್ ಸಂದರ್ಭದ ಷೇರು ಮೌಲ್ಯ 867.20 ರೂ.ಗಿಂತ ಶೇ.0.95 ಹೆಚ್ಚಾಗಿದೆ. ಮೊದಲ ದಿನದ ವಹಿವಾಟಿನ ಬಳಿಕ, ಬಿಎಸ್ಇನಲ್ಲಿ ಎಲ್ಐಸಿ ಮಾರುಕಟ್ಟೆ ಬಂಡವಾಳ 5.53 ಲ ಕೋಟಿ ರೂ.ಆಗಿತ್ತು. ಎಲ್ಐಸಿಯು 27.53 ಲ ಷೇರುಗಳನ್ನು ಹಸ್ತಾಂತರಿಸಿದ್ದು, 245.34 ಕೋಟಿ ರೂ. ವಹಿವಾಟು ನಡೆಸಿದೆ. ಕಂಪನಿ ಷೇರು ಮೌಲ್ಯ 902ರಿಂದ 949 ರೂಪಾಯಿ ನಿಗದಿ ಆಗಿತ್ತು. ಮೇ 4ರಂದು ಐಪಿಒ ಓಪನ್ ಆಗಿದ್ದು, ಮೇ 9ರಂದು ಕೊನೆಗೊಂಡಿತ್ತು. ಐಪಿಒ 2.95 ಪಟ್ಟು ಹೆಚ್ಚು ಸಬ್ಸ್ಕ್ರಿಪ್ಶನ್ ಹೊಂದಿತ್ತು. ಸರ್ಕಾರ ತನ್ನಪಾಲಿನ ಷೇರು ಮಾರಾಟ ಮಾಡಿ 20,557 ಕೋಟಿ ರೂ. ಸಂಗ್ರಹಿಸಿದೆ.