ಸಂವಿಧಾನ ಸಂರಕ್ಷಣಾ ಪಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ.ಎಚ್.ಹಾಲೇಶಪ್ಪ ಮಾತನಾಡಿದರು. ಪ್ರೊ.ರಾಚಪ್ಪ, ನಟರಾಜ್, ಚಂದ್ರಪ್ಪ, ರಾಘವೇಂದ್ರ, ಆನಂದ್, ರಂಗಸ್ವಾಮಿ, ಅನನ್ಯ ಶಿವು ಮುಂತಾದವರಿದ್ದರು.  
ನ್ಯೂಸ್

ಸಂವಿಧಾನದಿಂದ ವಿಮೋಚನೆ ಹೊಸ ದಾರಿಯ ಸೃಷ್ಟಿ

ಶಿವಮೊಗ್ಗ: ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದವರಿಗೆ ಸಂವಿಧಾನದ ಮೂಲಕ ವಿಮೋಚನೆಯ ಹೊಸ ದಾರಿಯನ್ನು ತೆರೆಯಲಾಯಿತು. ಸಂಕೋಲೆಗಳಿಂದ ಮುಕ್ತಗೊಳ್ಳುವ ಅನೇಕ ಅವಕಾಶಗಳು ಇದರಿಂದ ಸೃಷ್ಟಿಯಾದವು. ಹೀಗಾಗಿ ಸಂವಿಧಾನ ನಿರ್ಮಾತೃಗಳಿಗೆ ನಾವು ಋಣಿಯಾಗಿರಬೇಕು. ಸಂವಿಧಾನದ ಆಶಯಗಳ ರಕ್ಷಣೆಗೆ ಸಂಘಟಿತ ಹೋರಾಟ ನಡೆಸಬೇಕೆಂದು ಸಾಮಾಜಿಕ ಚಿಂತಕ ಪ್ರೊ.ರಾಚಪ್ಪ ಹೇಳಿದರು.

ನಗರ ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕುವುದರ ಮೂಲಕ ಸಂವಿಧಾನ ರಕ್ಷಣಾ ಪಡೆ ಹೆಸರಿನ ನೂತನ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರ ಎಲ್ಲ ಅವಕಾಶಗಳನ್ನು ಕಸಿಯಲಾಗಿತ್ತು. ಸಂವಿಧಾನವು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿದ್ದರಿಂದ ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಲು ಸಾದ್ಯವಾಗಿದೆ ಎಂದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ ಮಾತನಾಡಿ, ಸಂವಿಧಾನಕ್ಕೆ ಬದಲಾಗಿ ಮನುಸ್ಮತಿಯನ್ನು ಜಾರಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಶೋಷಿತ ಸಮುದಾಯಗಳನ್ನು ಗುಲಾಮರನ್ನಾಗಿಸಿಕೊಳ್ಳುತ್ತಾರೆ. ಇಂತ ಎಲ್ಲ ಪ್ರಯತ್ನಗಳ ವಿರುದ್ಧ ಸಂವಿಧಾನ ಸಂರಕ್ಷಣಾ ಪಡೆ ಒಂದು ಸೇನೆಯಂತೆ ಹೋರಾಡಲಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ, ತಾಲೂಕು ಅಧ್ಯಕ್ಷ ಚಂದ್ರಪ್ಪ, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಅನನ್ಯ ಶಿವು, ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆಯ ಸಂಚಾಲಕ ನಟರಾಜ್, ಡಿಎಸ್‌ಎಸ್ ಮುಖಂಡರಾದ ಆನಂದ್ , ಶೇಷಪ್ಪ, ಮುತ್ತು, ರಂಗಸ್ವಾಮಿ ಮುಂತಾದವರು ಭಾಗವಹಿಸಿದ್ದರು.