ಕೋಲಾರ: ಜಿಲ್ಲೆಯಲ್ಲಿ ಗ್ರಂಥಾಲಯ ಸಪ್ತಾಹದ ಅಭಿಯಾನದಡಿ ನವೆಂಬರ್ ಮಾಸದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ 10,000 ನೋಂದಣಿ ಗುರಿ ಹೊಂದಲಾಗಿದೆ ಎಂದು ಗ್ರಂಥಾಲಯ ಇಲಾಖೆ ಜಿಲ್ಲಾ ಉಪ ನಿರ್ದೇಶಕ ದಿವಾಕರ್ ಹೇಳಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2020ದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಸ್ಮರಣಾರ್ಥ ನ.20 ರವರೆಗೆ ಮನೆಗೊಬ್ಬ ಸದಸ್ಯ, ಸದಸ್ಯನಿಗೊಂದು ಪುಸ್ತಕ ಘೋಷ ವಾಕ್ಯದಡಿ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
ಸಾರ್ವಜನಿಕ ಗ್ರಂಥಾಲಯಗಳು ಈಗ ಡಿಜಿಟಲ್ ಗ್ರಂಥಾಲಯಗಳಾಗುತ್ತಿದ್ದು, ಓದುಗರು ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮೂಲಕ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿಯನ್ನು ಗೂಗಲ್‌ನಲ್ಲಿ ಜಾಲಾಡಿ ನೋಂದಣಿಯಾಗುವ ಮೂಲಕ ಉಚಿತವಾಗಿ ಸಾವಿರಾರು ಪುಸ್ತಕಗಳನ್ನು ಓದಬಹುದಾಗಿದೆ. ರಾಜ್ಯಾದ್ಯಂತ ನೂರಾರು ಮಂದಿ ಡಿಜಿಟಲ್ ಗ್ರಂಥಾಲಯದ ಸದಸ್ಯರಾಗಿ ಸೇವೆ ಪಡೆಯುತ್ತಿದ್ದು, ಜಿಲ್ಲೆಯಲ್ಲೂ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ. ವಿಶೇಷ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಎಸ್.ಗಣೇಶ್, ತಂತ್ರಜ್ಞಾನದ ಮೂಲಕ ಜ್ಞಾನವನ್ನು ಹಂಚುವ ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲೆಯಾದ್ಯಂತ ನೋಂದಣಿ ಮಾಡಿಸುವ ಅಭಿಯಾನವನ್ನು ನವೆಂಬರ್‌ನಲ್ಲಿ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕೇಂದ್ರ ಗ್ರಂಥಪಾಲಕಿ ಎಂ.ಸಿ.ನೇತ್ರಾವತಿ, ಸಹಾಯಕ ಗ್ರಂಥಪಾಲಕಿ ಆರ್.ನಾಗಮಣಿ, ಸಹ ಗ್ರಂಥಪಾಲಕ ಜವರೇಗೌಡ, ಮಾಲೂರು ತಾಲೂಕು ಗ್ರಂಥಪಾಲಕಿ ಕೆ.ಎ.ದಾಕ್ಷಾಯಿಣಿ, ಬಂಗಾರಪೇಟೆ ಗ್ರಂಥಾಲಯ ಸಹಾಯಕ ಎಸ್.ಎಸ್.ಹೇಮಾವತಿ, ಶ್ರೀನಿವಾಸಪುರ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಇದ್ದರು. ಈ ಸಂದರ್ಭದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.