ನ್ಯೂಸ್

ಮುನಿರತ್ನ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಸ್ಪೀಕರ್‌ಗೆ ಪತ್ರ

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಧಾನಸೌಧ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುಗೆ ಜೀವ ಬೆದರಿಕೆ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 17 (ಎ)ರಡಿ ಆರೋಪ ಪಟ್ಟಿ ಸಲ್ಲಿಸಲು ವಿಧಾನಸಭಾ ಸ್ಪೀಕರ್‌ಗೆೆ ಎಸ್‌ಐಟಿ ಮನವಿ ಮಾಡಿದೆ. ಆದರೆ, ಇಲ್ಲಿಯವರೆಗೂ ಉತ್ತರ ಬಂದಿಲ್ಲ. ಸ್ಪೀಕರ್ ಯು.ಟಿ. ಖಾದರ್ ಸಮ್ಮತಿಸಿದರೆ ಮುನಿರತ್ನ ವಿರುದ್ಧ ನ್ಯಾಯಾಲಯಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಮತ್ತೊಂದು ಕೇಸಿನಲ್ಲಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್‌ಗೆ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಿದ್ದ ಸರ್ಕಾರವು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ದೋಷಾರೋಪ ಪಟ್ಟಿ ಸಲ್ಲಿಕೆಗೆ ಯಾವುದೇ ಉತ್ತರ ಬಂದಿಲ್ಲ.

ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಲಕ್ಷ್ಮೀದೇವಿನಗರ ವಾರ್ಡ್‌ನ ಡಿ.ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನತಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಿರ್ವಹಣೆ ಗುತ್ತಿಗೆ ನೀಡುವ ವಿಚಾರವಾಗಿ ಗುತ್ತಿಗೆದಾರ ಚೆಲುವರಾಜುಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಬಗ್ಗೆ ಚೆಲುವರಾಜು ನೀಡಿದ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಸ ವಿಲೇವಾರಿಗೆ ಆಟೋ ಕೊಡಿಸುವುದಾಗಿ ನಂಬಿಸಿ ಗುತ್ತಿಗೆದಾರನಿಂದ ಶಾಸಕ 20 ಲಕ್ಷ ರೂ. ಲಂಚ ಪಡೆದಿದ್ದರು ಎಂಬ ಆರೋಪವಿತ್ತು. ಆದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಿಸಲು ಎಸ್‌ಐಟಿ ನಿರ್ಧರಿಸಿತ್ತು. ಈ ಸಲುವಾಗಿ ಸ್ಪೀಕರ್ ಅವರಿಂದ ಪೂರ್ವಾನುಮತಿ ಕೋರಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ವಿಡಿಯೋ, ಸಾಕ್ಷ್ಯ ಒದಗಿಸಲಿಲ್ಲ :

ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿಯನ್ನು ಹನಿಟ್ರ್ಯಾಪ್ ಯತ್ನ ಪ್ರಕರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಎಸ್‌ಐಟಿ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ದೂರುದಾರ ನಾರಾಯಣಸ್ವಾಮಿ, ತನ್ನ ಬಳಿ ವಿಡಿಯೋ ಮತ್ತು ಸಾಕಷ್ಟು ಸಾಕ್ಷಾೃಧಾರಗಳು ಇರುವುದಾಗಿ ಹೇಳಿದ್ದರು. ಆದರೆ, ತನಿಖೆ ವೇಳೆ ಹನಿಟ್ರ್ಯಾಪ್ ಸಂಬಂಧ ಯಾವುದೇ ವಿಡಿಯೋ ಅಥವಾ ಸಾಕ್ಷ್ಯ ಒದಗಿಸಿಲ್ಲ. ಅಲ್ಲದೆ, ತನಿಖೆ ವೇಳೆ ಆರೋಪ ಸಂಬಂಧ ದೃಢವಾದ ಸಾಕ್ಷ್ಯ ಲಭ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ.