ಶಾಸಕಿ ನಯನಾ ಮೋಟಮ್ಮ  
ನ್ಯೂಸ್

ಸರ್ಕಾರ ಸಂತ್ರಸ್ತ ಮಹಿಳೆಯರ ಭವಿಷ್ಯ ರೂಪಿಸಲಿ

ಮೂಡಿಗೆರೆ: ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ಭವಿಷ್ಯ ರೂಪಿಸಲು ಹಾಗೂ ಅವರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವಂಥ ವ್ಯವಸ್ಥೆ ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಲು ಶಾಸಕಿ ನಯನಾ ಮೋಟಮ್ಮ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
ಲೈಂಗಿಕ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯರು ಕುಟುಂಬಸ್ಥರಿಗೆ ಉತ್ತರಿಸಲಾಗದೆ ಮನೆ ಬಿಡುವ, ನಾನಾ ರೀತಿಯ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತನಿಖೆ ಸಂದರ್ಭದಲ್ಲಿ ಪುರುಷ ಅಧಿಕಾರಿಗಳೊಂದಿಗೆ ಇಂಥ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರ ತನಿಖೆಗಾಗಿ ವಿಶೇಷ ತಂಡ ಹಾಗೂ ಸಹಾಯವಾಣಿ ರಚಿಸಿದ್ದರೂ ಸಂತ್ರಸ್ತೆಯರ ಗೌಪ್ಯತೆ ಕಾಪಾಡುವ ಜತೆಗೆ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರದಂತೆ ತನಿಖೆ ನಡೆಸಬೇಕೆಂದು ಕೆಲ ಸಲಹೆಗಳನ್ನು ನೀಡಿದ್ದಾರೆ.
ಮುಖ್ಯವಾಗಿ ಮಹಿಳಾ ಅಧಿಕಾರಿಗಳೊಂದಿಗೆ ಸಂತ್ರಸ್ತೆಯರು ಚರ್ಚಿಸಲು ಗೌಪ್ಯ ಸ್ಥಳ ನಿಗದಿಯಾಗಬೇಕು. ಈ ಮೂಲಕ ಮಹಿಳೆಯರು ಅಳಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಂತ್ರಸ್ತೆಯರ ಸಮಸ್ಯೆ ಆಲಿಸಿದ ಬಳಿಕ ಆ ಸಮಸ್ಯೆಗೆ ಸ್ಪಂದನೆ ಹಾಗೂ ಭದ್ರತೆ ನೀಡಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಪರಿಹಾರ ಹಾಗೂ ಪ್ರತ್ಯೇಕ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು. ಮಹಿಳಾ ವಿಶೇಷ ತಂಡಕ್ಕೆ ಬೆಂಬಲವಾಗಿ ಓರ್ವ ಮಹಿಳಾ ಮನೋವೈದ್ಯರನ್ನು ನೇಮಿಸುವ ಅಗತ್ಯವಿದೆ. ಅಲ್ಲದೆ ಮಹಿಳಾ ಆಯೋಗದ ಓರ್ವ ಅಧಿಕಾರಿ ಅಥವಾ ಎನ್‌ಜಿಸಿ ಸಂಸ್ಥೆಯ ಮಹಿಳಾ ಸದಸ್ಯರು ಸಂತ್ರಸ್ತೆಯರನ್ನು ಸಂಪರ್ಕಿಸಿ ಅವರಿಗೆ ಧೈರ್ಯ ತುಂಬಿ, ಗೌಪ್ಯವಾಗಿ ಅವರನ್ನು ಮಹಿಳಾ ವಿಶೇಷ ತನಿಖಾ ತಂಡದವರ ಬಳಿ ಕರೆ ತರಲು ಮಧ್ಯಸ್ಥಿಕೆ ವಹಿಸಬೇಕು. ಇದರ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಅಂಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಂಥ ಪ್ರಕರಣದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಗಮನಾರ್ಹ ನಿಲುವು ಸರ್ಕಾರ ತೆಗೆದುಕೊಳ್ಳುವ ಮೂಲಕ ಸಂತ್ರಸ್ತ ಮಹಿಳೆಯರಿಗೆ ಮತ್ತೆ ಸಾಮಾಜಿಕ ಬದುಕು ಕಲ್ಪಿಸಬೇಕಾಗಿದೆ. ಸಂತ್ರಸ್ತೆಯರ ಪ್ರತಿ ಹೇಳಿಕೆಯನ್ನೂ ಗೌಪ್ಯವಾಗಿಡುವ ಭರವಸೆ ನೀಡಬೇಕು. ಈ ಪ್ರಕರಣದಿಂದಾಗಿ ನೊಂದು, ಅವಮಾನಕ್ಕೊಳಗಾಗಿರುವ ಸಂತ್ರಸ್ತ ಮಹಿಳೆಯರು ಸಮಾಜದಲ್ಲಿ ಮತ್ತೆ ಎಲ್ಲರಂತೆ ಬದುಕುವ ವಾತಾವರಣ ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.