ಬೆಂಗಳೂರು: ಶಾಸಕ ಮುನಿರತ್ನ ಪ್ರಕರಣದಿಂದ ಪ್ರಜಾಸತ್ತಾತ್ಮಕ ಮೌಲ್ಯ, ಸತ್ಸಂಪ್ರದಾಯಗಳಿಗೆ ತೀವ್ರವಾದ ಕೊಡಲಿ ಪೆಟ್ಟು ಬಿದ್ದಿದೆ. ಆದ್ದರಿಂದ ಅವರನ್ನು ಸದನದ ಸದಸ್ಯತ್ವದಿಂದ ಅಮಾನತು ಮಾಡಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದ್ದಾರೆ.
ಶಾಸಕ ಮುನಿರತ್ನ ಅವರು ಲಂಚದ ವ್ಯವಹಾರದಲ್ಲಿ ಹಣ ತಂದು ಕೊಡದ ಗುತ್ತಿಗೆದಾರರೊಬ್ಬರಿಗೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ಬಹಿರಂಗಗೊಂಡಿದೆ. ಬಳಸಬಾರದ ಭಾಷೆ, ಆಡಬಾರದ ಮಾತುಗಳನ್ನು ಆಡಿರುವುದು ಇಡೀ ನಾಗರಿಕ ಸಮಾಜವನ್ನು ಘಾಸಿಗೊಳಿಸಿದೆ. ಈ ಸಂಭಾಷಣೆಯು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.ಶಾಸಕರೊಬ್ಬರು ಇಂಥ ಕೀಳು ಮಟ್ಟಕ್ಕೆ ಇಳಿದಿರುವುದರಿಂದ ಶಾಸನ ಸಭೆ ಘನತೆಗೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುವಾಗ ಕೆಜಿಎ್ ಶಾಸಕ ಸಂಪಂಗಿ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದು ಶಾಸಕಾಂಗ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ.
ಈಗ ಮುನಿರತ್ನ ಅವರು ಅತ್ಯಂತ ಹೇಯ, ಅಸಭ್ಯ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಘಟನೆ ಕ್ಷಮಾರ್ಹವಲ್ಲ. ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರೆಲ್ಲ ದಾಪುಗಾಲನ್ನಿಡಬೇಕು. ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು. ಇಂತಹ ಅಸಭ್ಯ ವರ್ತನೆಗಳಿಗೆ ಶೂನ್ಯ-ಸಹನೆ ಇಡೀ ವಿಧಾನ ಮಂಡಲ ಹೊಂದಬೇಕಾದ ಸಂದರ್ಭ ಹಾಗೂ ಜನಾಪೇಕ್ಷೆ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಅನ್ವಯ ಮುನಿರತ್ನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.