ಕೋಲಾರ: ಗ್ರಾಮೀಣ ಭಾಗದ ದುಡಿಯುವ ವರ್ಗಗಳಿಗೆ ಕೆಲಸ ನೀಡುವ ಯೋಜನೆ ನರೇಗಾ. ಇದು ಗ್ರಾಮೀಣ ಜನತೆಗೆ ವರದಾನವಾಗಿದೆ. ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರಲು ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್ ಪಿ.ಬಾಗೇವಾಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ದುಡಿಯೋಣ ಬಾ ಅಭಿಯಾನದ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಎಲ್ಲ ಜನರು ಯೋಜನೆಯ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇ 1ರಿಂದ ಗ್ರಾಮೀಣ ಭಾಗದ ಕೂಲಿಕಾರರಿಗೆ 100 ದಿನಗಳ ಕೆಲಸವನ್ನು ಒದಗಿಸುವ ಸಲುವಾಗಿ ದುಡಿಯೋಣ ಬಾ ವಿಶೇಷ ಅಭಿಯಾನದ ಪ್ರಚಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ 2025-&26ನೇ ಸಾಲಿನಲ್ಲಿ ಎಲ್ಲ ಅರ್ಹ ಕೂಲಿಕಾರರಿಗೆ ಕನಿಷ್ಠ 100 ದಿನಗಳಿಗೆ ಸರಾಸರಿ 379 ರೂ. ಕೂಲಿ ನೀಡಿ ವಲಸೆ ತಪ್ಪಿಸುವುದು ಅಭಿಯಾನದ ಉದ್ದೇಶವಾಗಿದೆ. ಹೊಸ ಉದ್ಯೋಗ ಚೀಟಿ ವಿತರಣೆ ಮಾಡಿ ಕೂಲಿಯನ್ನು ಒದಗಿಸುವುದು. ದುರ್ಬಲ ವರ್ಗದ ಕುಟುಂಬಗಳಿಗೆ ಕೂಲಿ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಂಗವಿಕಲರು, ಮಹಿಳೆಯರು ಸೇರಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಸವಲತ್ತುಗಳನ್ನು ನೀಡುವುದು ಅಭಿಯಾನದ ಉದ್ದೇಶವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಗ್ರಾಮಗಳಿಗೂ ಆಟೋ ಮೈಕಿಂಗ್ ಮೂಲಕ ವ್ಯಾಪಕ ಪ್ರಚಾರ ಮಾಡಿ ಅನುಷ್ಠಾನ ಮಾಡಲು ಆದೇಶ ಮಾಡಲಾಗಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಬಿ.ಶಿವಕುಮಾರ್, ಯೋಜನಾ ನಿರ್ದೇಶಕ ಎಸ್.ವೆಂಕಟಾಚಲಪತಿ. ಇಒ ಬಿ.ಎಂ.ಮಂಜುನಾಥ್ ಉಪಸ್ಥಿತರಿದ್ದರು.