ನಾನು ಅಂತಹ ದೊಡ್ಡ ನಾಯಕನಾಗಲು ಆಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದುನೋಡೋಣ ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಂಗಳವಾರ ಸುದ್ದಿಗಾರ ಜತೆ ಮಾತನಾಡಿದ ಡಿಕೆಶಿ, ನೀವು ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ.
ನಾನು ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸ್ವಾತಂತ್ರ್ಯ ಚಳುವಳಿ ಎಂದರೆ ಏನು ಎಂಬುದೇ ಗೊತ್ತಿಲ್ಲ. ಈ ಚಳುವಳಿಯಲ್ಲಿ ಕಾಂಗ್ರೆಸಿಗರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅವರಿಗೆ ಅರಿವಿಲ್ಲ. ಗೋಡ್ಸೆ ಸಿದ್ಧಾಂತ ಪಕ್ಷದವರಿಂದ ನಾವು ಮಾತು ಕೇಳಬೇಕಿಲ್ಲ. ಈ ದೇಶಕ್ಕೆ ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ, ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಬಗ್ಗೆ ನಮಗೆ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯ 2ನೇ ಪ್ರಣಾಳಿಕ ಬಿಡುಗಡೆ; LKG ಟು PG ಉಚಿತ ಶಿಕ್ಷಣ; ಸ್ಫರ್ಧಾತ್ಮಕ ಆಕಾಂಕ್ಷಿಗಳಿಗೆ ಮಾಸಿಕ 15,000 ರೂ!
ಗಾಂಧಿ ಹತ್ಯೆ ಬಗ್ಗೆ ನೆಹರೂ ಅವರ ಮೇಲೆ ಯತ್ನಾಳ್ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, "ನಾನು ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಹೇಳಿಕೆಗಳು ಆ ಪಕ್ಷದ ಮನಸ್ಥಿತಿ ತೋರುತ್ತದೆ. ಅವರ ಹೇಳಿಕೆ ಬಗ್ಗೆ ಅವರ ಪಕ್ಷ ಉತ್ತರ ನೀಡಬೇಕು" ಎಂದರು.
ಗಾಂಧೀಜಿ ಹಾಗೂ ಕಾಂಗ್ರೆಸ್ ಕೊಟ್ಟ ಅಹಿಂಸೆಯ ಆದರ್ಶವನ್ನು ವಿಶ್ವ ಒಪ್ಪಿದೆ. ಇದನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸಬೇಕು. ಗಾಂಧೀಜಿ ಅವರ ತತ್ವ ಆದರ್ಶಗಳು, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಉಳಿಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ. ಗಾಂಧೀಜಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ತತ್ವ ಸಿದ್ಧಾಂತಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಗಾಂಧೀಜಿ ಅವರ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.