ಸಾಗರದ ಎಲ್‌ಬಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕೆ.ಎಸ್.ಬಸವರಾಜ, ಬಿ.ಆರ್.ಜಯಂತ್, ಡಾ. ಎ.ಎಸ್.ಲಕ್ಷ್ಮೀಶ್, ಡಾ. ಎಚ್.ಎಂ.ಶಿವಕುಮಾರ್, ಡಾ. ಟಿ.ನಿರಂಜನಮೂರ್ತಿ ಇತರರಿದ್ದರು.  
ನ್ಯೂಸ್

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಯತ್ನ ಗಂಭೀರವಾಗಿರಲಿ

ಸಾಗರ: ಕಠಿಣ ಪರಿಶ್ರಮ, ನಿರಂತರ ಓದು ಹಾಗೂ ಸತತ ಪ್ರಯತ್ನದಿಂದ ಅಂದುಕೊಂಡ ಗುರಿ ತಲುಪಲು ಸಾಧ್ಯ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಕೆ.ಎಸ್.ಬಸವರಾಜ ಹೇಳಿದರು.

ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಉನ್ನತ ಗುರಿ ಇಟ್ಟುಕೊಂಡು ಮುನ್ನಡೆದರೆ ಉನ್ನತವಾದುದನ್ನು ಸಾಧಿಸಲು ಸಾಧ್ಯ ಎಂದರು.

ಕೆಪಿಎಸ್‌ಸಿ, ಯುಪಿಎಸ್‌ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಆಯ್ಕೆ ಮಾಡಿಕೊಂಡಾಗ ನಮ್ಮ ಪ್ರಯತ್ನ ಹೆಚ್ಚು ಗಂಭೀರವಾಗಿರಬೇಕು. ರಾಜಕೀಯ ಪ್ರಭಾವ, ಹಣ ಬಲ ಇದೆ ಎಂದು ಓದುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಲಿಖಿತ ಪರೀಕ್ಷೆ ಉತ್ತಮವಾಗಿದ್ದರೆ ಯಾವುದೇ ಪ್ರಭಾವವಿಲ್ಲದೆ ಕೆಲಸ ಪಡೆಯಬಹುದು. ಜೀವನದಲ್ಲಿ ಏನೂ ಇಲ್ಲದವರು ದೊಡ್ಡ ಸಾಧನೆ ಮಾಡಿದ ಉದಾಹರಣೆ ಸಾಕಷ್ಟಿವೆ. ಅವರ ಸಾಧನೆ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಕವಿ ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರ, ಜಿ.ಕೆ.ಗೋವಿಂದರಾವ್ ಮುಂತಾದವರು ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರಬಂದಿದ್ದಾರೆ. ಅಡಿಗರ ಕಾಲದಲ್ಲಿ ವಿದ್ಯಾರ್ಥಿಗಳೇ ಬರೆದು ಪ್ರಕಟಿಸುತ್ತಿದ್ದ ‘ಅನ್ವೇಷಣೆ’ ಪುಸ್ತಕ ಈಗಲೂ ಬರುತ್ತಿರುವುದು ಶ್ಲಾಘನೀಯ. ಪಠ್ಯದಿಂದ ಅಂಕಗಳನ್ನು ಪಡೆದುಕೊಳ್ಳಬಹುದು. ಆದರೆ ಪಠ್ಯೇತರ ಓದಿನಿಂದ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾಲೇಜಿಗೆ 45 ಲಕ್ಷ ರೂ. ನೆರವು ನೀಡಿದ ಬೆಂಗಳೂರಿನ ಲಿಂಡೆ ಕಂಪನಿಯ ಮ್ಯಾನೇಜರ್ ಮನೀಷ್ ಬಿ. ಹೆಬ್ಸೆ, ಯುಪಿಎಸ್‌ಸಿಯಲ್ಲಿ 288ನೇ ರ‌್ಯಾಂಕ್ ಪಡೆದ ವಿಕಾಸ್, ಕೆ.ಎಸ್.ಬಸವರಾಜ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ಎ.ಎಸ್.ಲಕ್ಷ್ಮೀಶ್, ಪ್ರಮುಖರಾದ ಡಾ. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ, ಎಂ.ಆರ್.ಸತ್ಯನಾರಾಯಣ, ಬಿ.ಎಸ್.ಪ್ರಕಾಶ್, ವಿದ್ಯಾರ್ಥಿ ವೇದಿಕೆ ಸಂಚಾಲಕ ಡಾ. ಟಿ.ನಿರಂಜನಮೂರ್ತಿ, ಕ್ರೀಡಾ ವಿಭಾಗದ ನಿರ್ದೇಶಕ ಭರತ್‌ರಾಜ್, ನಿಶಾಂತ್, ಐಶ್ವರ್ಯಾ, ಅನನ್ಯಾ ಇತರರಿದ್ದರು.