ಪುಟ್ಟ ಮಕ್ಕಳಿಬ್ಬರು ಮುಸ್ಸಂಜೆಯ ಹೊತ್ತಿನಲ್ಲಿ ಕಡಲ ಕಿನಾರೆಗೆ ತಾಯಿಯೊಂದಿಗೆ ವಿಹಾರಕ್ಕೆ ಬಂದಿದ್ದರು. ಭೋರ್ಗರೆಯುತ್ತ ಮುನ್ನುಗ್ಗಿ ಬರುವ ತೆರೆಗಳ ರೋಮಾಂಚನವನ್ನು ವೀಕ್ಷಿಸುವುದರ ಜೊತೆಗೆ ಕಡಲ ದಂಡೆಯಲ್ಲಿ ಮರಳಿನ ಗೂಡು ಕಟ್ಟಿ ಆಟವಾಡುತ್ತಿದ್ದರು. ಕಡಲಂಚಿನಲ್ಲಿ ಸಿಗುವ ಚಿಪು್ಪಗಳನ್ನು ಆರಿಸಿ, ಮರಳಿನೊಂದಿಗೆ ಸೇರಿಸಿ ಒಂದು ಆಮೆಯ ಆಕೃತಿಯನ್ನು ಮಾಡೋಣ ಎಂದು ಆಟ ಆರಂಭಿಸಿದರು. ಎದ್ದು ಕಾಣಿಸುವ ಚಿಪ್ಪು, ಅದರ ಸುಂದರ ಪುಟ್ಟ ಪಾದದ ಕಾಲುಗಳು, ಭಾವನೆಗಳನ್ನೇ ಬಿಂಬಿಸುವಂತಹ ಕಣ್ಣುಗಳು ಇವೆಲ್ಲ ಸ್ಪಷ್ಟವಾಗಿ ಕಾಣಿಸುವಂತಹ ದೊಡ್ಡ ಆಮೆಯನ್ನೇ ಮಾಡಲಾರಂಭಿಸಿದರು. ಅವರು ಆಮೆಯನ್ನು ಮಾಡುತ್ತ ಮಾಡುತ್ತ ಸಾಗಿದಂತೆ ಸಮುದ್ರದ ಅಲೆಗಳು ಏರುತ್ತ ಹೋದವು. ಆದರೆ ಕನಸಿನ ಆಟದ ಆಮೆ ಸಂಪೂರ್ಣವಾಗಿ ತಯಾರಾಗಿಯೇ ಬಿಟ್ಟಿತು. ಚಂದದ ಆಮೆಯ ಸೌಂದರ್ಯವನ್ನು ಸವಿಯುತ್ತಿರುವಂತೆಯೇ ಮೇಲೇರಿ ಬಂದ ಅಲೆಯೊಂದು ಅದರ ಮೇಲೆ ಹರಿಯಿತು.
ಮರಳಿನ ಆಮೆ ಕಡಲ ನೀರಿನಲ್ಲಿ ಕರಗಿ ಕಣ್ಮರೆಯಾಗುತ್ತ ಹೋಗುತ್ತಿದ್ದಂತೆ ಮಕ್ಕಳ ಮುಖದಲ್ಲಿ ತುಸು ಬೇಸರ ಕಂಡಿತು. ಆಗ ತಾಯಿಯು ಸಮುದ್ರದ ಅಲೆಗಳು ಬಂದು ಮರಳಿನ ರಾಶಿಯ ಮೇಲೆ ಅಪ್ಪಳಿಸಿದಾಗ ಅದು ಸಮುದ್ರ ಸೇರುವುದು ಸಹಜ ಎಂದು ತಿಳಿಸಿ ಹೇಳಿದರು. ಆಗ ತಾವು ಗಂಟೆಗಳ ಕಾಲ ಕಡಲ ತಡಿಯಲ್ಲಿ ಕುಳಿತು ಮಾಡಿದ ಆಮೆ ಹಾಳಾಯಿತಲ್ಲ ಎಂಬ ಭಾವ ಅವರಲ್ಲಿ ಮೂಡಲಿಲ್ಲ.
ಮರಳಿನಲ್ಲಿ ಆಡುವ ಕನಸಿತ್ತು, ಕನಸಿನ ಆಮೆ ಮರಳಿನಲ್ಲಿ ಆಟದ ರೂಪದಲ್ಲಿ ತಯಾರಾಯಿತು. ಅಲೆಗಳ ಸೆಳೆತಕ್ಕೆ ತಾವು ಮಾಡಿದ ಆಮೆ ಸಮುದ್ರಕ್ಕೆ ಸೇರಿದರಲ್ಲೂ ಸಂತೋಷ ಕಾಣುವ ಮೂಲಕ ಆ ದಿನದ ಆಟ ಮನಕ್ಕೆ ಮುದ ನೀಡಿತ್ತು. ಅಂದಿನ ಸಂಜೆಯ ಸಮಯವನ್ನು ಸಂತೋಷದಿಂದ ಕಳೆದಿರುವುದು ಸಿಹಿ ನೆನಪಾಗಿ ಉಳಿದಿತ್ತು. ಹಾಗೆಯೇ ಇನ್ನೊಂದು ದಿನ ಸೂರ್ಯಾಸ್ತವನ್ನು ಸವಿಯುತ್ತ ಕಡಲ ಕಿನಾರೆಯಲ್ಲಿ ಮತ್ತೊಂದು ಆಟದೊಂದಿಗೆ ಕಾಲ ಕಳೆಯುವ ದಿನಕ್ಕಾಗಿ ಕನಸು ಕಾಣತೊಡಗಿದರು.
ಪುಟ್ಟ ಮಕ್ಕಳು ಕಟ್ಟಿದ ಮರಳಿನ ಪ್ರತಿಮೆ ನಾಶವಾದಂತೆಯೇ ನಾವು ಮಾಡಿದ ಅನೇಕ ಕೆಲಸಗಳು, ಕಟ್ಟಿದ ಕನಸುಗಳು ಆಗಾಗ ಅಳಿದು ಹೋಗಬಹುದು. ಆದರೆ ಆ ಕ್ಷಣದಲ್ಲಿ ಏನನ್ನು ಸಾಧಿಸಿದ್ದೇವೋ, ಒಳಿತನ್ನು ಮಾಡಿದ್ದೇವೆಯೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸಿಕ್ಕಿದ ಒಂದು ಸುಸಂದರ್ಭದಲ್ಲಿ ಸಂತೋಷದಿಂದ ನೆನಪಿಸಿಕೊಳ್ಳಬಹುದಾದ ಸತ್ಕಾರ್ಯವನ್ನು ನಾನು ಮಾಡಿದ್ದೇನೆ ಎಂಬ ತೃಪ್ತಿ ಹಾಗೂ ಹೆಮ್ಮೆಯನ್ನು ಪಡುವ ಮನಸ್ಥಿತಿ ನಮ್ಮದಾಗಬೇಕು.
ಮರಳಿನ ಆಮೆ ಸಮುದ್ರದಲ್ಲಿ ತೇಲಿ ಹೋದಾಗ ಮಕ್ಕಳಿಗೆ ತುಸು ಬೇಸರವಾದರೂ ವಾಸ್ತವವನ್ನು ಅರಿತ ಮೇಲೆ ಸಮಾಧಾನವಾದಂತೆ, ಕೆಲವು ಅಹಿತಕರ ಘಟನೆಗಳು ಘಟಿಸಿದಾಗ ಘಟನೆಗಳು ಮನಸ್ಸಿಗೆ ನೋವಾದರೂ ಅದೊಂದು ಕ್ಷಣಿಕ ಎಂದು ಭಾವಿಸಬೇಕು. ಮಕ್ಕಳು ನಾಳೆ ಮತ್ತೊಂದು ಮರಳು ಗೂಡಿನ ಆಟವನ್ನು ಆಡುವ ಕನಸನ್ನು ಕಂಡಂತೆ, ಜೀವನದಲ್ಲಿ ಹಿನ್ನಡೆಯಾದಾಗ ಕುಗ್ಗದೆ, ನಾಳೆ ಮತ್ತೊಂದು ಹೊಸ ಕೆಲಸವನ್ನು ಮಾಡುವ, ಆ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆಗಳನ್ನಿಡುವ ಕನಸು ಕಂಡು ಕಾರ್ಯಪ್ರವೃತ್ತರಾಗಬೇಕು.
‘ವಿಫಲತೆಗಳ ಬಗ್ಗೆ ಚಿಂತಿಸದಿರು. ಅವು ಸರ್ವೆಸಾಮಾನ್ಯವಾದವು. ಅವೇ ಬಾಳಿನ ಭೂಷಣಗಳು. ಅವುಗಳ ಬಗ್ಗೆ ಹೆಚ್ಚು ಗಮನ ಕೊಡಬೇಡ. ಆದರ್ಶಗಳನ್ನು ಸಾವಿರ ಸಾವಿರ ಸಲ ಎತ್ತಿಹಿಡಿ. ನೀನು ಸಾವಿರ ಸಲ ಸೋತರೂ ಮತ್ತೊಂದು ಸಲ ಪ್ರಯತ್ನವನ್ನು ಮಾಡು’ ಎಂಬ ವಿವೇಕವಾಣಿಯಂತೆ, ಸೋಲುಗಳಿಂದ ವಿಚಲಿತರಾಗದೆ ಗೆಲುವಿನತ್ತ ಮರಳಿ ಯತ್ನ ಮಾಡುತ್ತ ಮುಂದಡಿ ಇಡೋಣ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು) (ಪ್ರತಿಕ್ರಿಯಿಸಿ: manollasavv@gmail.com)